ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಒಂದಂಕಿಗೆ ಇಳಿಕೆಯಾದ ಆಹಾರ ಹಣದುಬ್ಬರ ದರ (Food inflation | Potatoes | Pulses | Wheat | Inflation | Government)
PTI
ಆಲೂಗಡ್ಡೆ, ದ್ವಿದಳ ಧಾನ್ಯ ಮತ್ತು ಗೋಧಿ ದರಗಳಲ್ಲಿ ಇಳಿಕೆಯಾಗಿದ್ದರಿಂದ,ಫೆಬ್ರವರಿ 26ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ಒಂದಂಕಿಗೆ ಇಳಿಕೆಯಾಗಿ ಶೇ.9.52ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.10.39ಕ್ಕೆ ತಲುಪಿತ್ತು. ಆಹಾರ ವಸ್ತುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರದಲ್ಲಿ ಇಳಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ವಸ್ತುಗಳ ದರ ಏರಿಕೆ ಮತ್ತು ಕಚ್ಚಾ ತೈಲ ದರಗಳ ಏರಿಕೆಯಿಂದಾಗಿ ನಿರಂತರವಾಗಿ ಏರಿಕೆ ಕಾಣುತ್ತಿರುವ ಆಹಾರ ಹಣದುಬ್ಬರದಿಂದ ಕಂಗಾಲಾಗಿದ್ದ ಕೇಂದ್ರ ಸರಕಾರಕ್ಕೆ ಅಲ್ಪಮಟ್ಟಿನ ನಿರಾಳತೆ ದೊರೆತಂತಾಗಿದೆ.

ವಾರ್ಷಿಕ ಆಧಾರದ ಅನ್ವಯ ಪ್ರಸಕ್ತ ವಾರದಲ್ಲಿ ಗೋಧಿ ದರದಲ್ಲಿ ಶೇ.1.07ರಷ್ಟು ಇಳಿಕೆಯಾಗಿದ್ದು, ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.3.91 ರಷ್ಟು ಕುಸಿದಿದೆ. ಆಲೂಗಡ್ಡೆ ದರದಲ್ಲಿ ಕೂಡಾ ಶೇ.9ರಷ್ಟು ಇಳಿಕೆಯಾಗಿದೆ.

ಏತನ್ಮಧ್ಯೆ, ವಾರ್ಷಿಕ ಆಧಾರದ ಅನ್ವಯ ಪ್ರಸಕ್ತ ವಾರದಲ್ಲಿ, ತರಕಾರಿ ದರಗಳಲ್ಲಿ ಶೇ.9.23ರಷ್ಟು ಏರಿಕೆಯಾಗಿದೆ. ಈರುಳ್ಳಿ ದರದಲ್ಲಿ ವರ್ಷದಿಂದ-ವರ್ಷಕ್ಕೆ ಹೋಲಿಸಿದಲ್ಲಿ ಶೇ.3.90ರಷ್ಟು ಹೆಚ್ಚಳವಾಗಿದೆ.

ಭತ್ತದ ದರದಲ್ಲಿ ಕೂಡಾ ಶೇ.1.16ರಷ್ಟು ಏರಿಕೆಯಾಗಿದ್ದು, ಮೊಟ್ಟೆ, ಮಾಂಸ ಮತ್ತು ಮೀನು ದರಗಳಲ್ಲಿ ಶೇ.15.38ರಷ್ಟು ದುಬರಿಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹಣ್ಣುಗಳ ದರದಲ್ಲಿ ಶೇ.18.75ರಷ್ಟು ಏರಿಕೆಯಾಗಿದೆ. ಹಾಲಿನ ದರದಲ್ಲಿ ಶೇ.8.42ರಷ್ಟು ದುಬಾರಿಯಾಗಿವೆ.

ಆಹಾರರೇತರ ವಸ್ತುಗಳ ವಿಭಾಗದಲ್ಲಿ ಶೇ.29.85 ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಇಂಧನ ಮತ್ತು ವಿದ್ಯುತ್ ದರದಲ್ಲಿ ಶೇ.9.48 ರಷ್ಟು ಏರಿಕೆಯಾಗಿದ್ದರೇ ಪೆಟ್ರೋಲ್ ದರದಲ್ಲಿ ಕೂಡಾ ಶೇ.23.14ರಷ್ಟು ಏರಿಕೆಯಾಗಿದೆ.

ಹಣದುಬ್ಬರ ದರ ಏರಿಕೆಗೆ ಆಹಾರ ಹಣದುಬ್ಬರ ದರ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನೆವರಿ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.8.23ಕ್ಕೆ ತಲುಪಿದೆ. ಮುಂಬರುವ ಮಾರ್ಚ್ ಅಂತ್ಯದ ವೇಳೆಗೆ ಹಣದುಬ್ಬರ ದರ ಶೇ.7ಕ್ಕೆ ಇಳಿಕೆಯಾಗಲಿದೆ ಎಂದು ಕೇಂದ್ರ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಇವನ್ನೂ ಓದಿ