ಪ್ರಧಾನಿ ಆಕಾಂಕ್ಷಿಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ. ಪ್ರಧಾನಿ ಆಗುವ ಏಕೈಕ ಉದ್ದೇಶದಿಂದ 'ರಿಸೆಶನ್ ಪಾರ್ಟಿ' (ಆರ್ಥಿಕ ಹಿಂಜರಿತ ಪಕ್ಷ) ರಚಿಸಿರುವ ಹಾಸ್ಯನಟ ಜಸ್ಪಾಲ್ ಭಟ್ಟಿ, ಚಂಡೀಗಢ ಲೋಕಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಧುಮುಕುವುದಾಗಿ ಘೋಷಿಸಿದ್ದಾರೆ.
ತನ್ನದೇ ನಿರುದ್ಯೋಗ ಸ್ಥಿತಿಯಿಂದ ಹೊರಬರಲು ಮತ್ತು ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ತನ್ನ ಸ್ವಂತ ಆರ್ಥಿಕ ಸ್ಥಿತಿ ಸುಧಾರಿಸಲು ತಾನು ಸ್ಪರ್ಧಿಸುತ್ತಿರುವುದಾಗಿ ಭಟ್ಟಿ ಅವರು ಸೋಮವಾರ ಘೋಷಿಸಿದ್ದಾರೆ.
'ಚುನಾವಣೆಗೆ ಸ್ಪರ್ಧಿಸುವ ಮೂಲಕ ಆರ್ಥಿಕ ಹಿಂಜರಿತದಿಂದ ಪಾರಾಗಲು ನಿರ್ಧರಿಸಿದ್ದೇನೆ. ನನ್ನ ವಿಜಯಕ್ಕೆ ಯಾರು ಬೇಕಾದರೂ ಮುಕ್ತವಾಗಿ ನಿಧಿ ಒದಗಿಸಬಹುದಾಗಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಇದರ ದುಪ್ಪಟ್ಟು ಲಾಭ ಅವರಿಗೆ ಲಭಿಸಲಿದೆ. ಶೀಘ್ರವೇ ನಾಮಪತ್ರ ಸಲ್ಲಿಸಲಿದ್ದೇನೆ' ಎಂದು ಭಟ್ಟಿ ಹೇಳಿದ್ದಾರೆ.
'ಪ್ರಧಾನ ಮಂತ್ರಿ ಪದವಿಯ ಅಭ್ಯರ್ಥಿ ತಾನು ಎಂದು ಇತ್ತೀಚೆಗೆ ವಿವಿಧ ಪಕ್ಷಗಳ ನಾಯಕರು ಘೋಷಿಸಿಕೊಳ್ಳುತ್ತಿರುವ ಪ್ರಕ್ರಿಯೆ ಹೆಚ್ಚಾಗಿದೆ. ನಾನು ಕೂಡ ಅಭ್ಯರ್ಥಿ' ಎಂದಿರುವ ಅವರು, ಚಂಡೀಗಢದ ಸುತ್ತಮುತ್ತ ತಮ್ಮ ಪಕ್ಷವು ಸ್ಲಮ್‌ಗಳನ್ನು ಪ್ರೋತ್ಸಾಹಿಸಲಿದೆ. ಇದು ಭವಿಷ್ಯದ ಚುನಾವಣೆಗಳಲ್ಲಿ ಓಟು ತಂದುಕೊಡಲಿದೆ ಎಂದಿದ್ದಾರೆ. ಈ ಸ್ಲಮ್‌ಗಳು ಭವಿಷ್ಯದಲ್ಲಿ ನಮಗೆ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನೂ ತಂದುಕೊಡಲಿವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನಯಾ ಪೈಸೆಯನ್ನೂ ಬಿಚ್ಚುವುದಿಲ್ಲ. ಅಂದರೆ ನಾನು ನನ್ನ ಸ್ವಂತ ಕಿಸೆಯಿಂದ ಒಂದು ಪೈಸೆಯನ್ನೂ ವ್ಯಯಿಸುವುದಿಲ್ಲ ಎಂದು ಹೇಳುತ್ತಾರೆ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಜಸ್ಪಾಲ್ ಭಟ್ಟಿ. ಬುದ್ಧಿವಂತ ಮತ್ತು ಮೂರ್ಖ ಮತದಾರರ ಪ್ರತ್ಯೇಕಿಸಲಿರುವ ತಾನು, ಬುದ್ಧಿವಂತ ಮತದಾರರಲ್ಲಿ ಓಟು ಕೇಳಲು ಹೋಗಲಾರೆ ಎಂದಿದ್ದಾರವರು.