ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಖಾಸಗಿ ಪತ್ರದ ಮೂಲಕ ಚುನಾವಣಾ ಪ್ರಚಾರ!
ಮತಸಮರ
ಭಾರತ ಹೈಟೆಕ್‌ ಆಗಿರುವುದರಲ್ಲಿ ಉಳಿದ ರಾಷ್ಟ್ರಗಳಿಗೇನೂ ಕಡಿಮೆಯಿಲ್ಲ. ಮೊಬೈಲ್ ಫೋನ್, ಇಮೇಲ್ ಸೌಲಭ್ಯಗಳಿರುವಾಗ ಪತ್ರದ ಮೊರೆ ಯಾರು ಹೋಗುತ್ತಾರೆ ಹೇಳಿ. ಆದರೂ, ಮುಂಬರುವ ಲೋಕಸಭಾ ಚುನಾವಣೆಗೆ ಭುವನೇಶ್ವರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಎಂ.ಎ.ಖಾರಬೇಲ ಸ್ವೈನ್ ಹಳೇ ಪದ್ಧತಿಗೆ ಶರಣು ಹೋಗಿದ್ದಾರೆ. ತಮ್ಮ ಪ್ರತಿ ಮತದಾರರ ಮನೆಗೂ ತಾವೇ ಕೈಯಾರೆ ಸಹಿ ಮಾಡಿದ ಪೋಸ್ಟ್ ಕಾರ್ಡ್‌ಗಳನ್ನು ಅಂಚೆ ಮೂಲಕ ಕಳುಹಿಸುವ ಮೂಲಕ ಮತದಾರರನ್ನು ತಮ್ಮೆಡೆಗೆ ಸೆಳೆಯುತ್ತಾರೆ!

ಸ್ವೈನ್ ಬಾಲಸೋರ್ ಕ್ಷೇತ್ರದಿಂದ ಮೂರು ಬಾರಿ ವಿಜಯ ಸಾಧಿಸಿರುವ ಸಂಸದ ಈಗ ನಾಲ್ಕನೇ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅಂದಹಾಗೆ ಅವರು ಅಂಚೆ ಮೂಲಕ ಮತ ಯಾಚನೆ ಮತಯಾಚನೆ ಮಾಡುತ್ತಿರುವುದು ಇದೇ ಮೊದಲಲ್ಲ. ಅವರೇ ಹೇಳುವಂತೆ, ಅವರು ತಮ್ಮ ರಾಜಕೀಯ ಜೀವನದಲ್ಲಿ ಸುಮಾರು ಅರ್ಧ ಮಿಲಿಯನ್‌ಗೂ ಹೆಚ್ಚು ಪೋಸ್ಟ್ ಕಾರ್ಡ್‌ಗಳನ್ನು ಕಳುಹಿಸಿದ್ದಾರಂತೆ. ಅದರಲ್ಲೂ, ಅವರ ಮೂರು ಬಾರಿಯ ವಿಜಯಕ್ಕೆ ಈ ಪೋಸ್ಟ್‌ಕಾರ್ಡ್‌ಗಳೇ ಕಾರಣವಂತೆ.

ಸ್ವೈನ್ ಕಳುಹಿಸಿದ ಪೋಸ್ಟ್‌ಕಾರ್ಡ್‌ಗಳಿಗೆ ಅವರ ಹಲವು ಮತದಾರರು ಮರು ಪ್ರತಿಕ್ರಿಯಿಸಿ ಕಾರ್ಡ್ ಕಳುಹಿಸಿದ್ದಾರಂತೆ. ಅಷ್ಟೇ ಅಲ್ಲ ಹಲವು ಮತದಾರರು ಸ್ವೈನ್ ಕಳುಹಿಸಿದ ಪೋಸ್ಟ್‌ಕಾರ್ಡ್‌ನ್ನು ತಮ್ಮ ಬಳಿಯೇ ಇಟ್ಟುಕೊಂಡು ಸ್ವೈನ್ ಅವರು ಸಮಾರಂಭಗಳಲ್ಲೋ ಚುನಾವಣಾ ಪ್ರಚಾರದಲ್ಲೋ ಸಿಕ್ಕಾಗ ಮತ್ತೆ ಅವರಿಗೇ ತೋರಿಸಿ ಖುಷಿಪಡುತ್ತಾರಂತೆ. ''ಅಂಚೆ ಮೂಲಕ ಪತ್ರಗಳನ್ನು ಮತದಾರರಿಗೆ ಕಳುಹಿಸಿದರೆ ಅವರಿಗೆ ನಾನು ಆಪ್ತನೆನಿಸುತ್ತೇನೆ'' ಎಂದೂ ಹೇಳುತ್ತಾರೆ 56ರ ಹರೆಯದ ಸ್ವೈನ್. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ 5,000 ಪೋಸ್ಟ್ ಕಾರ್ಡನ್ನು ಮತದಾರರ ಮನಮನೆಗೆ ಕಳುಹಿಸಿದ್ದಾರೆ. ಇನ್ನು 15 ದಿನಗಳಲ್ಲಿ 60,000ಕ್ಕೂ ಹೆಚ್ಚು ಪೋಸ್ಟ್ ಕಾರ್ಡನ್ನು ಸ್ವೈನ್ ಕಳುಹಿಸಲಿದ್ದಾರೆ.

ವಿಶೇಷವೆಂದರೆ, ಪೋಸ್ಟ್‌ಕಾರ್ಡ್‌ನಲ್ಲಿ ಮತದಾರರಿಗೆ ತನಗೆ ಮತಹಾಕಿ ಎಂಬ ಪ್ರಾರ್ಥನೆಯ ಜತೆಗ ಅವರೇ ಕೈಯಾರೆ ಸಹಿ ಮಾಡಿದ ಹಸ್ತಾಕ್ಷರವಿರುತ್ತದೆ. ಅವರೇ ಹೇಳುವಂತೆ, ಇವೆಲ್ಲ ಪತ್ರಗಳನ್ನೂ ಸ್ವತಃ ಸ್ವೈನ್ ಅವರೇ ಅಂಚೆಡಬ್ಬಿಗೆ ಹಾಕುತ್ತಾರಂತೆ. ''ಜನರೊಂದಿಗೆ ಮಾತನಾಡುವಾಗ ಜನರ ವಿಳಾಸಗಳನ್ನೂ ಕೇಳುತ್ತೇನೆ. ಹಳ್ಳಿ, ಪಟ್ಟಣಗಳಿಗೆ ಭೇಟಿ ನೀಡುವಾಗ ಪ್ರತಿಯೊಬ್ಬರ ವಿಳಾಸವನ್ನೂ ಕೇಳಿ ಬರೆದಿಟ್ಟುಕೊಳ್ಳುತ್ತೇನೆ. ನಂತರ, ಅವೆಲ್ಲವನ್ನೂ ನನ್ನ ಖಾಸಗಿ ಕಂಪ್ಯೂಟರ್‌ನಲ್ಲಿ ದಾಖಲಿಸುತ್ತೇನೆ. ಹೀಗಾಗಿ ನನ್ನ ಕಂಪ್ಯೂಟರ್‌ನಲ್ಲಿ ಒಂದು ಲಕ್ಷ ಮಂದಿಯ ಮನೆಯ ವಿಳಾಸವಿದೆ'' ಎನ್ನುತ್ತಾರೆ ಸ್ವೈನ್.

ಇದಲ್ಲದೆ, ಸ್ವೈನ್ ಹೇಳುವಂತೆ, ''ಜನರ ಹೆಸರನ್ನು ನನ್ನದೇ ಹಸ್ತಾಕ್ಷರದಲ್ಲಿ ಬರೆದಾಗ ಜನರಿಗೆ ತಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ, ಭರವಸೆ ಸಿಗುತ್ತದೆ. ಅದಕ್ಕಾಗಿ ನಾನು ಈ ಪ್ರಯತ್ನ ಮಾಡುತ್ತೇನೆ. ಹಾಗಾಗಿಯೇ ನನಗೆ ಜನಬೆಂಬಲವಿದೆ. ನ್ನ ಕ್ಷೇತ್ರದ ನೂರಾರು ಹಳ್ಳಿಗಳಲ್ಲಿ ಈಗಲೂ ಮೊಬೈಲ್ ಸಂಪರ್ಕ ತಲುಪಿಲ್ಲ. ಹೀಗಾಗಿಯೇ ನಾನು ಪತ್ರದ ಮೂಲಕ ಕಂಪ್ಯೂಟರ್, ಇಮೇಲೆ, ಮೊಬೈಲ್ ನೆಟ್‌ವರ್ಕ್ ಇಲ್ಲದ ಸಾಮಾನ್ಯ ಜನರನ್ನೂ ತಲುಪುತ್ತೇನೆ'' ಎಂದು ತಮ್ಮ ಯಶಸ್ಸನ್ನು ಬಿಚ್ಚಿಡುತ್ತಾರೆ.

ಬಾಲಸೋರ್ ಕ್ಷೇತ್ರದ ಒಬ್ಬ ಸಾಮಾನ್ಯ ಮತದಾರ ಸುಧಾಕರ್ ಮೊಹಂತಿ ಹೇಳುವಂತೆ, ನನಗೆ ಈವರೆಗೆ ಸ್ವೈನ್ ಅವರಿಂದ ಹಲವಾರು ಪತ್ರಗಳು ಬಂದಿವೆ. ಅವರ ಪತ್ರ ಬಂದಾಗ ನನಗೆ ತುಂಬ ಖುಷಿಯಾಗುತ್ತದೆ. ಅವರು ನನ್ನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಇದರಿಂದ ತಿಳಿಯುತ್ತದೆ ಎನ್ನುತ್ತಾರೆ.

ಸ್ವೈನ್ ಸ್ಪರ್ಧಿಸುವ ಬಾಲಸೋರ್ ಕ್ಷೇತ್ರದಲ್ಲಿ ಸುಮಾರು 3,700 ಹಳ್ಳಿಗಳಿವೆ. ಲೋಕಸಭೆಯಲ್ಲಿ ಬಿಜೆಪಿಯ ಡೆಪ್ಯುಟಿ ಚೀಫ್ ವಿಪ್ ಆಗಿದ್ದರೂ, ಜತೆಗೆ ತಮ್ಮ ಬಳಿ ಮೊಬೈಲ್ ಸೌಕರ್ಯವಿದ್ದರೂ, ಸ್ವೈನ್ ಅವರು ತುಂಬ ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡುತ್ತಾರೆ. ಅವರು ಪತ್ರ ಬರೆಯುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ರಾಜಕೀಯಕ್ಕೆ ಬರುವ ಮೊದಲು ಸ್ವೈನ್ ಅವರು ರೇಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.