ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಉತ್ತರ ಪ್ರದೇಶ 'ಮಾಯಾ' ಜಾಲ: ತತ್ತರಿಸುತ್ತಿದೆ ಪ್ರಜಾಪ್ರಭುತ್ವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರ ಪ್ರದೇಶ 'ಮಾಯಾ' ಜಾಲ: ತತ್ತರಿಸುತ್ತಿದೆ ಪ್ರಜಾಪ್ರಭುತ್ವ
ಅವಿನಾಶ್ ಬಿ.
ಮಾಯಾವತಿಗೆ ಏನಾಗಿದೆ? ಅಂತ ಇಡೀ ದೇಶವೇ ಕೇಳತೊಡಗಿದೆ. ದಲಿತರ ಉದ್ಧಾರಕ್ಕಾಗಿ
ND
ಹೋರಾಡಿದ ತನ್ನ ರಾಜಕೀಯ ಗುರು ಕಾನ್ಶೀರಾಂ, ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆಗೆ ತನ್ನದೂ ಸೇರಿದಂತೆ, ಪ್ರತಿಮೆಗಳನ್ನು ನಿರ್ಮಿಸಿ ಈಗಷ್ಟೇ ಸಾರ್ವಜನಿಕರ ಖಜಾನೆಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಈ "ದಲಿತೋದ್ಧಾರಕಿ" ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಮಾಯಾವತಿ ತಾನೇನು ಮಾಡುತ್ತಿದ್ದೇನೆ ಎಂಬುದು ಬಹುಶಃ ಅವರಿಗೇ ಅರಿವಿಲ್ಲವೋ?


ಮಾಯಾವತಿಯ ಪ್ರಧಾನಿಯಾಗಬೇಕೆಂಬ ಕನಸಿನ ತುಣುಕು, ವ್ಯಕ್ತಿಪೂಜೆಯ ಪ್ಯಾಶನ್ ಮತ್ತು ಫ್ಯಾಶನ್ ಒತ್ತಟ್ಟಿಗಿರಲಿ. ಇದಕ್ಕಾಗಿ ಸಾರ್ವಜನಿಕರ ಹಣ ಪೋಲು ಮಾಡುವುದೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯುವ ಮೊದಲೇ, ತನ್ನ ಬಗ್ಗೆ, ತನ್ನ ಕಾರ್ಯವೈಖರಿ ಬಗ್ಗೆ ಧ್ವನಿಯೆತ್ತಿದವರನ್ನು ಜೈಲಿಗಟ್ಟುತ್ತಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಡಿಜಿಪಿಯೊಬ್ಬರನ್ನು ಹೆಲಿಕಾಪ್ಟರ್‌ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಳುಹಿಸಿ, ಅತ್ಯಾಚಾರಕ್ಕೀಡಾದ ಒಬ್ಬ ದಲಿತ ಮಹಿಳೆಗೆ ಕೇವಲ 25 ಸಾವಿರ ರೂ. ಪರಿಹಾರ ಕೊಡಿಸಿದ್ದನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ರೀಟಾ ಬಹುಗುಣ ಜೋಷಿ ಆಕ್ಷೇಪಿಸಿದ್ದರು. ಒಬ್ಬ ಮಹಿಳೆಯಾಗಿ, ಮಾಯಾವತಿ ಅವರು ಶೀಲಕ್ಕೆ ಕಟ್ಟಿದ ಬೆಲೆಯೇ ಇದು? ಮತ್ತು ಅದು ಆಕೆಗಾದ ಅನ್ಯಾಯಕ್ಕೆ ಸಾಂತ್ವನ ನೀಡಬಹುದೇ ಎಂದು ರೀಟಾ ಪ್ರಶ್ನಿಸಿದ್ದರು. ಮಾತ್ರವಲ್ಲದೆ ಕೋಪದ ಭರದಲ್ಲಿ, ಮಾಯಾವತಿಗೂ ಹೀಗೇ ಆದರೆ ಒಂದು ಕೋಟಿ ರೂ. ಪರಿಹಾರ ನೀಡಲು ಸಿದ್ಧ ಎಂದೂ ಘೋಷಿಸಿದ್ದರು. ಆದರೆ, ತನ್ನ ಮಾತಿನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಯಾಚಿಸುವುದಾಗಿಯೂ ಆನಂತರ ಹೇಳಿದ್ದರು. ಆದರೂ ರೀಟಾ ಮೇಲೆ ಜಡಿಯಲಾದ ಕೇಸಾದರೂ ಎಂಥದ್ದು? ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆಯ ಕಠಿಣ ಕಾಯಿದೆ ಪ್ರಯೋಗ!

Mayawati
PTI
ಇತ್ತೀಚೆಗೆ ಫಿಲಿಬಿಟ್‌ನಲ್ಲಿ ಬಿಜೆಪಿಯ ಯುವ ನೇತಾರ ವರುಣ್ ಗಾಂಧಿಯ ಮೇಲೆ ದೇಶದ್ರೋಹಿಗಳ ಮೇಲೆ ವಿಧಿಸುವಂತಹ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿ, ದೇಶಾದ್ಯಂತ ಟೀಕೆಗಳು ಕೇಳಿಬಂದಾಗ, "ಅದು ನಾನಲ್ಲ, ನನ್ನ ಕೈಯಲ್ಲಿಲ್ಲ, ಕೇಂದ್ರ ಸರಕಾರವೇ ಅದಕ್ಕೆ ಅನುಮೋದನೆ ನೀಡಿದ್ದು" ಎಂದೆಲ್ಲಾ ಹೇಳಿ ತಪ್ಪಿಸಿಕೊಂಡಿದ್ದ ಇದೇ ಮಾಯಾವತಿ, ಮತ್ತೆ ತಮ್ಮ ಸರ್ವಾಧಿಕಾರತ್ವ ಮೆರೆದಿದ್ದಾರೆ ಎಂಬುದು ಜನಾಕ್ರೋಶ.

ಕಳೆದ ವಾರ ನಡೆದ ಇನ್ನೊಂದು ಘಟನೆ ನೋಡಿ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ, ನೆಹರೂ-ಗಾಂಧಿ ಕುಟುಂಬದ ಸಾಂಪ್ರದಾಯಿಕ ನೆಲೆ ಹಾಗೂ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಅಮೇಠಿ ಕ್ಷೇತ್ರದಲ್ಲಿ ದಿನಕ್ಕೆ 16 ಗಂಟೆ ವಿದ್ಯುತ್ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸಿಗರು ಪ್ರತಿಭಟನೆ ನಡೆಸುತ್ತಿದ್ದರು. ಅವರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಹೇಳಲಾಗುತ್ತಿದ್ದರೂ, ಅಲ್ಲಿರುವ ಜನಾಕ್ರೋಶವನ್ನು ಕೂಡ ನಾವು ಮರೆಯುವಂತಿಲ್ಲ. ಮಾಯಾವತಿ ಉದ್ದೇಶಪೂರ್ವಕವಾಗಿ ರಾಹುಲ್ ಕ್ಷೇತ್ರಕ್ಕೆ ಅನ್ಯಾಯ ಎಸಗುತ್ತಿದ್ದಾರೆ ಎಂಬ ಕೋಪವೊಂದು ಕಡೆ. ಅಲ್ಲಿ ಲಾಠಿ ಚಾರ್ಜ್ ನಡೆಸಲಾಯಿತು. ಹಲವು ಪ್ರತಿಭಟನಾಕಾರರು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಈ ಪ್ರತಿಭಟನೆ ಬಗ್ಗೆ ಹಿಂದೆ-ಮುಂದೆ ನೋಡದೆ ಮಾಯಾವತಿ ನ್ಯಾಯಾಂಗ ತನಿಖೆಗೆ ಆದೇಶಿಸಿಬಿಟ್ಟಿದ್ದಾರೆ.

ಈ ಪ್ರತಿಮೆಗಳ ಸ್ಥಾಪನೆಗೆ ದುಂದುವೆಚ್ಚ, ಲಾಠಿ ಚಾರ್ಜ್, ರೀಟಾ ಮನೆಗೆ ಬೆಂಕಿ ಹಚ್ಚಿದ್ದು, ಅದಕ್ಕೂ ಹಿಂದೆ ವರುಣ್ ಗಾಂಧಿ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿದ್ದು... ಇವೆಲ್ಲವೂ ಮಾಯಾವತಿಯ ದುಡುಕಿನ, ದ್ವೇಷ ರಾಜಕಾರಣದ ಪ್ರತೀಕವಷ್ಟೆ ಎಂದು ಹೇಳದಿರಲು ಸಾಧ್ಯವಿಲ್ಲ.

ಹಾಗಿದ್ದರೆ ವಸ್ತು ಸ್ಥಿತಿ ಏನಿದ್ದೀತು?
ಉತ್ತರ ಪ್ರದೇಶ ಹೇಳಿ ಕೇಳಿ "ಗೂಂಡಾ ರಾಜ್" ಎಂದೇ ಕುಪ್ರಸಿದ್ಧಿ ಪಡೆದಿದೆ. ಹಿಂದಿನ ಕಲ್ಯಾಣ್ ಸಿಂಗ್ ಸರಕಾರವಿರಲಿ, ಬಿಎಸ್ಪಿ-ಬಿಜೆಪಿ ಮೈತ್ರಿ ಸರಕಾರವಿರಲಿ, ಮಾಯಾವತಿ, ಮುಲಾಯಂ ಸಿಂಗ್ ಸರಕಾರಗಳೇ ಇರಲಿ, ಇಲ್ಲಿ ಪಕ್ಕದ ಬಿಹಾರದ ಮಾದರಿಯಲ್ಲಿ ರಾಜಕೀಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದವರು ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳೇ. ರಾಜಕೀಯ ಪ್ರವೇಶವು ಕೂಡ ಅವರಿಗೆ ಸುಲಲಿತ. ಧನ, ಜನ ಮತ್ತು ತೋಳ್ ಬಲವಿರುವರಿಗೆ ಇಲ್ಲಿ ರಾಜಕೀಯವೆಂದರೆ ಮಕ್ಕಳಾಟ.

ಹೀಗಾಗಿ ದೇಶದ ಅತೀ ಹೆಚ್ಚು ಜನಸಾಂದ್ರತೆಯ, ಅತಿ ದೊಡ್ಡ ರಾಜ್ಯದ, ಅತೀ ಹೆಚ್ಚು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳುಳ್ಳ ರಾಜ್ಯದೊಳಗೆ ರಾಜಕೀಯದಲ್ಲಿ ಇಂತಹ ತಂತ್ರ-ಪ್ರತಿತಂತ್ರ-ಕುತಂತ್ರಗಳು ಸಾಮಾನ್ಯವೇ ಆಗಿಬಿಟ್ಟಂತಾಗಿರುವುದು ಪ್ರಜಾಪ್ರಭುತ್ವದ ದುರಂತ.

ಯಾಕೆಂದರೆ, ರೀಟಾ ಮನೆಗೆ ಕಾಂಗ್ರೆಸಿಗರು ತಾವಾಗಿಯೇ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ್ದಾರೆ ಎಂಬುದು ಬಿಎಸ್ಪಿ ಆರೋಪ. ಮಾತ್ರವಲ್ಲ, ವಿದ್ಯುತ್ ಒದಗಿಸಬೇಕಾಗಿರುವುದು ಕೇಂದ್ರ ಸರಕಾರ, ಅದು ಉತ್ತರ ಪ್ರದೇಶಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ವಿದ್ಯುತ್ ಒದಗಿಸುತ್ತಿಲ್ಲ, ಈ ಕಾರಣಕ್ಕೆ ಅಮೇಠಿಯಲ್ಲಿಯೂ ತೊಂದರೆಯಾಗಿದೆ ಎನ್ನುತ್ತಾರೆ ಮಾಯಾವತಿ. ಇದು ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವಣ ನಾಟಕ ಎನ್ನುತ್ತದೆ ಬಿಜೆಪಿ. ಹಾಗಿದ್ದರೆ ನಂಬುವುದು ಯಾರನ್ನು?

ವರುಣ್ ಪ್ರಕರಣ, ರೀಟಾ ಘಟನೆಗಳು ಇಂಥದ್ದೇ ಹೊಲಸು ರಾಜಕೀಯಕ್ಕೆ ಹೊರತಾದುದೇನೂ ಅಲ್ಲ. ಇಲ್ಲಿ ಈ ರೀತಿಯ ರಾಜಕೀಯ ಮಾಡುವುದು ರಾಜಕೀಯ ಪಕ್ಷಗಳಿಗೆ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯವೂ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅಂಶ.

ಹೀಗಾಗಿ, ಇವುಗಳೆಲ್ಲವೂ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾದರೂ, ಇಂಥ ಕೆಲವೊಂದು 'ಸಣ್ಣಪುಟ್ಟ' ಘಟನೆಗಳಿಗಾಗಿ ಜನರಿಂದ ಆಯ್ಕೆಯಾದ ಒಂದು ಸರಕಾರವನ್ನೇ ವಜಾಗೊಳಿಸಿ ಎಂಬ ಕೂಗಿಗೆ ಅರ್ಥವಿಲ್ಲ ಅನ್ನಿಸುತ್ತದೆ. ಯಾಕೆಂದರೆ, ಇದಕ್ಕಿಂತ ದೊಡ್ಡದಾದ ಸಾವಿರ ಕೋಟಿ ರೂ. ಮೊತ್ತದ ಖಜಾನೆ ಲೂಟಿ, ಹಗರಣಗಳು, ಹಣ ಪೋಲು ಇತ್ಯಾದಿ ಆರೋಪಗಳು ಸಾಕಷ್ಟಿವೆ! ತಾಜ್ ಕಾರಿಡಾರ್ ಹಗರಣದ ಸಿಬಿಐ ಕೇಸು, ಪಾರ್ಟಿ ಫಂಡ್‌ಗೆ ಸಂಸದರ ನಿಧಿಯಿಂದ ಹಣ ಕೊಡುವಂತೆ ಆದೇಶಿಸಿದ್ದು, ಕೊಡಲೊಪ್ಪದ , ಕೋಟ್ಯಂತರ ರೂ. ಖರ್ಚು ಮಾಡಿ ಬರ್ತ್‌ಡೇ ಆಚರಣೆ, ಇತ್ತೀಚೆಗಿನ 2000 ಕೋಟಿ ರೂ. ವೆಚ್ಚದ 'ಪ್ರತಿಮಾ ಅಭಿಯಾನ' ಹಾಗೂ ಆದಾಯದ ಮೂಲಕ್ಕಿಂತ ಹೆಚ್ಚು ಶ್ರೀಮಂತಿಕೆ... ಇತ್ಯಾದಿ ಪ್ರಕರಣಗಳಿರುವಾಗ! ಸರಕಾರ ವಜಾಗೊಳಿಸುವುದು ಕೊನೆಯ ಅಸ್ತ್ರ.

ಜಾತಿ ಲೆಕ್ಕಾಚಾರದ ರಾಜಕೀಯದಲ್ಲಿಯೇ ಅಧಿಕಾರಕ್ಕೇರಿರುವ ಮಾಯಾವತಿ, ಪ್ರಧಾನಿ ಪಟ್ಟದ ಮೇಲೂ ಕಣ್ಣಿಟ್ಟಿರುವುದು ಹೊಸ ವಿಷಯವಲ್ಲ. ಆದರೆ 2007-08ರ ಹಣಕಾಸು ವರ್ಷದಲ್ಲಿ ಈ ದಲಿತರ ನಾಯಕಿ ಕಟ್ಟಿದ ಆದಾಯ ತೆರಿಗೆ ನಮ್ಮ ಫೋರ್ಬ್ಸ್ ಪಟ್ಟಿಯಲ್ಲಿ ಹೆಸರಿರುವ ಭಾರತದ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿಗಿಂತಲೂ ಹೆಚ್ಚು ಎಂಬುದು ಎಷ್ಟು ಮಂದಿಗೆ ಗೊತ್ತಿದೆ?

ಇಲ್ಲೀಗ, ರೀಟಾ ಪ್ರಕರಣದಲ್ಲಿ ಮಾಯಾವತಿ ಕೈಗೊಂಡಿರುವ ಕ್ರಮ ಎಷ್ಟು ಸರಿ ಎಂಬ ಜಿಜ್ಞಾಸೆಗಿಂತಲೂ ಮುಖ್ಯವಾಗುವುದು ಇದೇ ರೀತಿ ದ್ವೇಷ ರಾಜಕಾರಣ ಮುಂದುವರಿದಲ್ಲಿ, ಆ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಮತ್ತು ಗತಿ ಏನಾಗಬೇಡ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
ನಿಮ್ಮ ಅಭಿಪ್ರಾಯ ಬೇಕಾಗಿದೆ, ದಯವಿಟ್ಟು ಕ್ಲಿಕ್ ಮಾಡಿ
ಮಳೆ ಕ್ಷೀಣ: 'ಕಾವೇರ'ಲಿದೆಯೇ ತ.ನಾಡು-ಕರ್ನಾಟಕ !
ತಂದೆಯರ ದಿನ: ಮಗುವನ್ನು ಪ್ರೀತಿಸುವ ಹಕ್ಕು ನಮಗೂ ಇರಲಿ!
ಅಪ್ಪಂದಿರ ದಿನ: ಅಪ್ಪ ಸೋತು ಸುಸ್ತು!
ಸಿಂಗ್-ಜರ್ದಾರಿ ಭೇಟಿ: ಅಮೆರಿಕ 'ಒತ್ತಡ' ತಂತ್ರದ ಫಲವೇ?