ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಪೆಟ್ರೋಲ್ ಕಂಪನಿಗಳು ಲಾಭ ದಾಖಲಿಸುತ್ತಿದ್ದರೂ ನಷ್ಟ ಹೇಗೆ? (Petrol Price | Oil Price | IOC | HPCL | BPCL | UPA Government | Crude Oil)
Bookmark and Share Feedback Print
 
ಅವಿನಾಶ್ ಬಿ.
PTI
ಎಲ್ಲ ಬೆಲೆ ಏರಿಕೆಗಳಿಗೆ ಮಹಾ ತಾಯಿ ಈ ತೈಲೋತ್ಪನ್ನಗಳ ಬೆಲೆ ಏರಿಕೆ. ವಿಶೇಷವಾಗಿ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ ಮತ್ತು ಅಡುಗೆ ಅನಿಲಗಳ ಬೆಲೆ ಏರಿಸಿದರೆಂದಾದರೆ, ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರಿದಂತೆಯೇ. ಈ ತೈಲವನ್ನು ಹೊಂದಿಕೊಂಡ ಸರಕು ಸಾಗಾಟ ವೆಚ್ಚ, ಪ್ರಯಾಣ ದರ, ಹೋಟೆಲ್ ಆಹಾರವೂ ತುಟ್ಟಿಯಾಗುತ್ತದೆ... ಇದು ಬೆಲೆ ಏರಿಕೆಯ ಮಾಲೆ ಪಟಾಕಿ ಇದ್ದಂತೆ.

ಹೀಗಿದ್ದಾಗ್ಯೂ, ತೈಲೋತ್ಪನ್ನಗಳ ಬೆಲೆಯನ್ನು ಯದ್ವಾ ತದ್ವಾ ಮನ ಬಂದಂತೆ ಏರಿಸುವುದರ ಹಿಂದಿರುವ ಹುನ್ನಾರವೇನು? ಎಂಬ ಪ್ರಶ್ನೆ ಮೂಡುವುದು ಅತ್ಯಂತ ಸಹಜ. ಸರಕಾರವಾಗಲೀ, ಅಥವಾ ತೈಲ ವಿತರಣಾ ಕಂಪನಿಗಳಾಗಲೀ - ತೈಲ ಬೆಲೆ ಏರಿಕೆಗೆ ನೀಡುತ್ತಿರುವ ಕಾರಣ ಒಂದೇ - ನಾವು ನಷ್ಟದಲ್ಲಿದ್ದೇವೆ; ಅಷ್ಟು ಕಡಿಮೆ ಬೆಲೆಯಲ್ಲಿ ಮಾರಿದ್ರೆ ಪೂರ್ತಿ ಮುಳುಗಿಹೋಗ್ತೀವಿ ಅಂತ! ಇದರ ಬೆನ್ನ ಹಿಂದೆ ಬಿದ್ದಾಗ ಹೊರ ಬಂದ ಎರಡು ಪ್ರಮುಖ ಸಂಗತಿಗಳು ಇಲ್ಲಿವೆ.

ಬೆಲೆ ಏರಿಕೆ: ದಿಕ್ಕುತೋಚದೆ ಕುಳಿತಿದೆ ಯುಪಿಎ: ಕ್ಲಿಕ್ ಮಾಡಿ

ಒಂದನೆಯದು...
ಭಾರತದ ಪ್ರಧಾನ ತೈಲ ವಿತರಣೆ ಕಂಪನಿಗಳೆಂದರೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ಗಳು (ಬಿಪಿಸಿಎಲ್).

ಇವುಗಳು ಕಳೆದ 2010 ವರ್ಷದ ಮಧ್ಯಭಾಗದಲ್ಲಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ (Q2) ಪ್ರಕಟಿಸಿರುವ ಲಾಭ-ನಷ್ಟಗಳನ್ನು ನೋಡೋಣ.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಾಭ ಘೋಷಿಸಿದ್ದು
5294 ಕೋಟಿ ರೂಪಾಯಿ (ಹಿಂದಿನ ವರ್ಷದ ಇದೇ ಅವಧಿಯಲ್ಲಿ 284 ಕೋಟಿ ಲಾಭ, Q3 ಯಲ್ಲಿ ಲಾಭಾಂಶವು 696.6 ಕೋಟಿಗೆ (ಶೇ.76.5) ಇಳಿಕೆಯಾಗಿದ)
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಾಭಾಂಶ
2089.61 ಕೋಟಿ ರೂಪಾಯಿ (ಹಿಂದಿನ ವರ್ಷದ ಇದೇ ಅವಧಿಯಲ್ಲಿ 136.68 ಕೋಟಿ ರೂ. ನಷ್ಟ! Q3 ಫಲಿತಾಂಶ ಜ.27ಕ್ಕೆ ಘೋಷಣೆಯಾಗಲಿದೆ)
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಾಭ ಗಳಿಕೆ
2142 ಕೋಟಿ ರೂಪಾಯಿ (ಹಿಂದಿನ ವರ್ಷದ ಇದೇ ಅವಧಿಯಲ್ಲಿ 159 ಕೋಟಿ ರೂ. ನಷ್ಟ, Q3 ಫಲಿತಾಂಶ ಜನ.31ಕ್ಕೆ ಘೋಷಣೆಯಾಗಲಿದೆ)

ಇಷ್ಟು ಲಾಭಾಂಶ ದಾಖಲಿಸಿದರೂ, ನಷ್ಟದಲ್ಲೇ ನಡೆಯುತ್ತಿದ್ದರೆ ಈ ಕಂಪನಿಗಳು ಉಳಿಯುತ್ತಿರುವುದಾದರೂ ಹೇಗೆ? ಪ್ರಶ್ನೆಗೆ ತಿಳಿದವರು ಉತ್ತರಿಸಿ!

ಎರಡನೆಯದು....
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ತೈಲ ಬೆಲೆಯು ಬ್ಯಾರೆಲ್‌ಗೆ 87 ಡಾಲರ್ ಇದ್ದದ್ದು 93ಕ್ಕೆ ಏರಿದೆ. ಹೀಗಾಗಿ ತೈಲಬೆಲೆ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ಘಟಾನುಘಟಿ ಮಂತ್ರಿಗಳು, ಅಧಿಕಾರಸ್ಥರು, ಮಹೋದಯರೆಲ್ಲರೂ. ಹಾಗಿದ್ದರೆ, ಮೂರು ವರ್ಷಗಳ ಹಿಂದೆ ಕೂಡ ಕಚ್ಚಾ ತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ 92 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆಯು ದೇಶದಲ್ಲಿ ಲೀಟರಿಗೆ 50 ರೂಪಾಯಿಯ ಆಸುಪಾಸಿನಲ್ಲಿತ್ತು. ಈಗ ಒಂದು ಬ್ಯಾರೆಲ್‌ಗೆ (115.7 ಲೀಟರ್) ಒಂದೇ ಒಂದು ಡಾಲರ್ ಹೆಚ್ಚಿದೆ (93 ಡಾಲರ್) ಅಷ್ಟೇ. ಆದರೂ ಪೆಟ್ರೋಲ್ ಬೆಲೆ ಲೀಟರಿಗೆ 65 ರೂಪಾಯಿವರೆಗಿದೆ! ಹಾಗಿದ್ದರೆ ಅಂತಾರಾಷ್ಟ್ರೀಯ ಮಟ್ಟದ ಬೆಲೆ ಏರಿಕೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಅಂತ ಸರಕಾರವೇನಾದರೂ ಸುಳ್ಳು ಹೇಳುತ್ತಿದೆಯೇ?

ಏಕೈಕ ವ್ಯತ್ಯಾಸವೆಂದರೆ ಅಂದು ಪೆಟ್ರೋಲ್ ಬೆಲೆ ನಿಯಂತ್ರಣ ಸರಕಾರದ ಕೈಯಲ್ಲಿತ್ತು, ಈಗ ಸರಕಾರದ ಬದಲು, ಕಳೆದ ಜೂನ್ ತಿಂಗಳಿಂದೀಚೆಗೆ ಆಯಾ ತೈಲ ಕಂಪನಿಗಳಿಗೇ ಪೆಟ್ರೋಲ್ ಬೆಲೆ ನಿಗದಿ ಅಧಿಕಾರ ನೀಡಲಾಗಿದೆ. ಆರು ತಿಂಗಳಲ್ಲಿ ಐದಾರು ಬಾರಿ ಸ್ವಲ್ಪಸ್ವಲ್ಪವೇ ದರ ಏರಿಸಲಾಗಿದೆ.

ಹಾಗಿದ್ದರೆ, ಇಷ್ಟೊಂದು ಲಾಭ ಘೋಷಿಸಿಯೂ, ಪ್ರತೀ ಲೀಟರ್ ಪೆಟ್ರೋಲಿಗೆ ನಮಗೆ ಇಂತಿಷ್ಟು ನಷ್ಟವಾಗುತ್ತಿದೆ, ಡೀಸೆಲ್‌ನಲ್ಲಿಷ್ಟು, ಅಡುಗೆ ಅನಿಲದಲ್ಲಿಷ್ಟು ನಷ್ಟವಾಗುತ್ತದೆ ಎಂದು ಈ ಕಂಪನಿಗಳು ಹೇಳುತ್ತಾ, ದರ ಏರಿಕೆ ಮಾಡುತ್ತವೆ ಎಂದಾದರೆ, ಈ ನಷ್ಟದ ಹೊರತಾಗಿಯೂ ಕಂಪನಿಗಳಿಗೆ ಲಾಭ ಬರುವುದಾದರೂ ಎಲ್ಲಿಂದ?

ಇಂಡಿಯನ್ ಆಯಿಲ್ ಹೇಳಿಕೆ ಪ್ರಕಾರ, ಈಗಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಡೀಸೆಲ್ ಬೆಲೆ ಲೀಟರಿಗೆ ಇನ್ನೂ 7.65 ರೂ., ಸೀಮೆಎಣ್ಣೆ ಬೆಲೆ 19.60 ರೂ. ಹಾಗೂ ಅಡುಗೆ ಅನಿಲ ಬೆಲೆ 366.28 ರೂ. ಹೆಚ್ಚು ಮಾಡಿದರೆ ಮಾತ್ರ ನಮಗೆ ನಷ್ಟವಾಗುವುದಿಲ್ಲ. ಅಂದರೆ ಈಗಿನ ಪರಿಸ್ಥಿತಿಯಲ್ಲಿ ತಮಗೆ ದಿನಕ್ಕೆ 159 ಕೋಟಿ ರೂಪಾಯಿವರೆಗೆ ಹೊರೆ ಆಗುತ್ತಿದೆ ಎಂದಿದೆ ಐಒಸಿ.

ಶೇ.50ರಷ್ಟೂ ತೆರಿಗೆ ಭರಿಸುತ್ತಿದ್ದೇವೆ...
ಇನ್ನು ನಾವು ಖರೀದಿಸುವ ಪೆಟ್ರೋಲಿಗೆ ಅರ್ಧಕ್ಕರ್ಧದಷ್ಟು ತೆರಿಗೆ, ಸುಂಕ, ಸೆಸ್, ಹಾಳು-ಮೂಳು ಅಂತೆಲ್ಲಾ ಏನೇನನ್ನೋ ನಾವು ಕೊಡುತ್ತಿದ್ದೇವೆ. ಈಗಿನ ದೆಹಲಿಯ ಪೆಟ್ರೋಲ್ ಬೆಲೆಯ ಅಂದಾಜಿನಲ್ಲಿ, ಲಭ್ಯ ಮಾಹಿತಿಯ ಪ್ರಕಾರ ಇರುವ ಸುಂಕಗಳೇ ಶೇ.50 ದಾಟುತ್ತವೆ!
ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ಬೆಲೆ ಮತ್ತು ತೆರಿಗೆಗಳು
ಪೆಟ್ರೋಲ್ ಬೆಲೆ28.93 ರೂ.
ಕೇಂದ್ರದ ಅಬಕಾರಿ ಸುಂಕ14.78 ರೂ.
ಪೆಟ್ರೋಲ್ ಮಾರಾಟ ತೆರಿಗೆ1.73 ರೂ.
ವ್ಯಾಟ್5.50 ರೂ.
ಡೀಲರ್ ಕಮಿಶನ್1.05 ರೂ.
ಶೈಕ್ಷಣಿಕ ಸೆಸ್0.43 ರೂ.
ಸಾಗಾಟ ವೆಚ್ಚ6 ರೂ.
ಒಟ್ಟು58.42 ರೂ.

ತೈಲ ಸಚಿವಾಲಯ ಈಗ ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪೆಟ್ರೋಲ್ ಬೆಲೆ ಇಳಿಸುವ ನಿಟ್ಟಿನಲ್ಲಿ ಸುಂಕ ಕಡಿತದ ಬಗ್ಗೆ ಯೋಚಿಸಲು ಕೇಳಿಕೊಂಡಿದ್ದಾರೆ. ಅಂದರೆ ಯುಪಿಎ ಒಳಗೆಯೇ ಗೊಂದಲಗಳಿವೆ. ಇದೇ ಕ್ರಮವನ್ನು ಯಾವತ್ತೋ ತೆಗೆದುಕೊಂಡಿದ್ದರೆ, ಜನರಿಗೆ ಈ ರೀತಿಯ ಬವಣೆ ಇರುತ್ತಿರಲಿಲ್ಲ. ಆಮದು ಮತ್ತು ಅಬಕಾರಿ ಸುಂಕ ರದ್ದುಗೊಳಿಸಲು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಈಗಾಗಲೇ ವಿತ್ತ ಸಚಿವ ಪ್ರಣಬ್ ಮುಖರ್ಜಿಗೆ ಪತ್ರ ಬರೆದಿದ್ದಾರೆ.

ಬೆಲೆ ಏರಿಕೆ ನಿಯಂತ್ರಣಕ್ಕೆ ಸಮ್ಮಿಶ್ರ ರಾಜಕೀಯದಿಂದ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಭಾವೀ ಪ್ರಧಾನಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಹೇಳಿ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಪೆಟ್ರೋಲಿಯಂ ಬೆಲೆ ಇಳಿಕೆಗೆ ಸಮ್ಮಿಶ್ರ ರಾಜಕೀಯ ತೊಡಕಾಗುವುದಾದರೂ ಹೇಗೆ? ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಡಿಎಂಕೆಗಳು ಈಗಾಗಲೇ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿವೆ. ಇದರ ಬೆಲೆ ಇಳಿಸಲು ಸಮ್ಮಿಶ್ರ ರಾಜಕೀಯ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂಬುದು ಖರೆ.

ಪೆಟ್ರೋಲನ್ನು ಹಿಂಡುತ್ತಿದೆ ಸರಕಾರ...
ಪೆಟ್ರೋಲ್ ಮೇಲೆ ತೆರಿಗೆಗಳ ರೂಪದಲ್ಲಿ ನಾವು ಕೇಂದ್ರ ಸರಕಾರಕ್ಕೆ ಶೇ.50ರಷ್ಟು ಹಣವನ್ನು ತೆರುತ್ತಿದ್ದೇವೆ ಎಂಬುದು ಬಹುತೇಕರಿಗೆ ಈಗಾಗಲೇ ತಿಳಿದಿರುವ ಸಂಗತಿ. ಅಂದರೆ ಒಂದು ಲೀಟರಿನಲ್ಲಿ 30 ರೂಪಾಯಿ ಅಂದಾಜು ಹಣವೂ ತೆರಿಗೆ ರೂಪದಲ್ಲಿ ನಾವೇ ತೆರುತ್ತಿದ್ದೇವೆ. ಪೆಟ್ರೋಲ್‌ನಿಂದ ಇಷ್ಟು ಹಣ ಬಂದರೂ ಸರಕಾರವು ಅದರ ಬೆಲೆ ಮತ್ತಷ್ಟು ಏರಿಸುತ್ತಲೇ ಇದೆ. ಅಂದರೆ ಸರಕಾರಕ್ಕೆ ಇದು ಕಾಮಧೇನು ಇದ್ದಂತೆ. ಹಿಂಡಿದಷ್ಟೂ ಹಣ ಬರುತ್ತದೆ ಎಂಬ ಆಲೋಚನೆ.

ಒಂದು ಝಳಕ್: ಇಪ್ಪತ್ತೆರಡು ವರ್ಷಗಳ ಹಿಂದೆ ಈ ತೈಲೋತ್ಪನ್ನಗಳ ದರ ಎಷ್ಟಿತ್ತು ಅಂತ ತಿಳಿದುಕೊಳ್ಳುವಾಸೆಯೇ? ಇಲ್ಲಿದೆ ನೋಡಿ: 1989ರ ಏಪ್ರಿಲ್ 1ರಂದು ದೆಹಲಿಯಲ್ಲಿ ಜಾರಿಯಲ್ಲಿದ್ದ ದರಗಳು: ಪೆಟ್ರೋಲ್ ಲೀಟರಿಗೆ 8.50 ರೂ. ಸೀಮೆಎಣ್ಣೆ 2.25 ರೂ, ಡೀಸೆಲ್ 3.50 ರೂ. ಮತ್ತು ಎಲ್‌ಪಿಜಿ ದರ 57.60 ರೂ.!

ಇನ್ನೂ ಒಂದು ಆಸೆ ಕೆರಳಿಸುವ ಮಾಹಿತಿಯನ್ನು ಗೆಳೆಯರೊಬ್ಬರು ಹಂಚಿಕೊಂಡಿದ್ದಾರೆ. ಓದಿ ಸುಮ್ಮನಾಗಿ!: ದುಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 18 ರೂಪಾಯಿ ಮತ್ತು ಬಹ್ರೈನ್‌ನಲ್ಲಿ ಲೀಟರಿಗೆ 12 ರೂಪಾಯಿ ಮಾತ್ರ!
ಸಂಬಂಧಿತ ಮಾಹಿತಿ ಹುಡುಕಿ