ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ, ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಪಾಕಿಸ್ತಾನ ಸರಕಾರದ ಬಂಧನದಲ್ಲಿಲ್ಲ ಎಂದು ಪಾಕ್‌ನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಪಾಕ್ ರಕ್ಷಣಾ ಸಚಿವರು ಅಜರ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ ಒಂದು ವಾರದಲ್ಲೇ ಅದಕ್ಕೆ ವಿರುದ್ಧವಾದ ಹೇಳಿಕೆ ವಿದೇಶಾಂಗ ಸಚಿವರಿಂದ ಹೊರಬಿದ್ದಿದೆ." ಮೌಲಾನ್ ಮಸೂದ್ ಅಜರ್ ಪಾಕಿಸ್ತಾನ ಸರಕಾರದ ವಾಂಟೆಡ್ ಪಟ್ಟಿಯಲ್ಲಿದ್ದಾನೆ, ಆದರೆ ಆತ ನಮ್ಮ ಬಂಧನದಲ್ಲಿಲ್ಲ ಅವನು ಇವರೆಗೆ ಸ್ವತಂತ್ರನಾಗಿದ್ದಾನೆ" ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಚೌಧರಿ ಅಹಮದ್ ಮುಖ್ತರ್ ಒಂದು ವಾರ ಹಿಂದಷ್ಟೇ ಅಜರ್‌ನನ್ನು ಪಾಕಿಸ್ತಾನಿ ಆಧಿಕಾರಿಗಳು ಬಂಧಿಸಿದ್ದಾರೆ ಎಂದು ಟಿವಿ ಚಾನೆಲ್ ಒಂದಕ್ಕೆ ತಿಳಿಸಿದ್ದರು. ಅಜರ್ ಯಾರು? ಭಾರತದ ಇಂಡಿಯನ್ ಏರಲೈನ್ಸ್ ವಿಮಾನವನ್ನು 1999ರಲ್ಲಿ ಉಗ್ರರು ಅಪಹರಿಸಿ ಕಂದಾಹಾರ್‌ಗೆ ಕೊಂಡೊಯ್ದಾಗ ಉಗ್ರರ ಬೇಡಿಕೆಗೆ ಮಣಿದ ಭಾರತ ಸರಕಾರ ಪ್ರಯಾಣಿಕರ ಬದಲಿಗೆ ತನ್ನ ಬಂಧನದಲ್ಲಿದ್ದ ಅಜರ್‌ನನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಅಜರ್ ಜೈಷೆ ಸಂಘಟನೆಯನ್ನು ಹುಟ್ಟು ಹಾಕಿದ್ದ. ಮುಂಬಯಿ ಮೇಲಿನ ಪಾಕ್ ಉಗ್ರರ ದಾಳಿಯ ಹಿನ್ನಲೆಯಲ್ಲಿ ಅಜರ್ ಜೊತೆಗೆ ಉಗ್ರ ಮುಖಂಡರಾದ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆನನ್ ಅವರನ್ನು ಹಸ್ತಾಂತರಿಸಬೇಕೆಂದು ಭಾರತ ಮನವಿ ಸಲ್ಲಿಸಿತ್ತು.ಆದರೆ, ಪಾಕಿಸ್ತಾನ ಎಲ್ಲಾ ಶಂಕಿತ ಉಗ್ರರ ಬಗೆಗೂ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದೇವೆ ಆದರೆ ಯಾವುದೇ ಬಂಧಿತರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ತಿಳಿಸಿತ್ತು. |