ತಮ್ಮ ಎಡೆಬಿಡಂಗಿತನದ ಹೇಳಿಕೆಗಳಲ್ಲಿ ಯು-ಟರ್ನ್ ತೆಗೆದುಕೊಂಡಿರುವ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮುಂಬಯಿ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನಿಯರು ಎಂಬುದಕ್ಕೆ ಸರಿಯಾದ ಸಾಕ್ಷ್ಯಧಾರಗಳಿಲ್ಲ ಮತ್ತು ದಾಳಿಯ ಸಂದರ್ಭ ಬಂಧಿಸಲ್ಪಟ್ಟಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನಿಯನೆಂದು ಸಾಬೀತಾಗಿಲ್ಲ ಎಂದು ಹೇಳಿದ್ದಾರೆ." ಇದನ್ನು ಸಾಬೀತು ಪಡಿಸುವ ಯಾವುದಾದರೂ ಸಾಕ್ಷಿಯನ್ನು ನೀವು ಗಮನಿಸಿದ್ದೀರ, ನಾನು ಯಾವುದೇ ನಿಜವಾದ ಸಾಕ್ಷ್ಯಧಾರವನ್ನು ನೋಡಿಲ್ಲ" ಎಂದು ಜರ್ದಾರಿ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಈ ಹಿಂದೆ ಮುಂಬಯಿ ಮೇಲೆ ದಾಳಿ ನಡೆಸಿದ 'ರಾಷ್ಟ್ರರಹಿತರು' ಪಾಕಿಸ್ತಾನದಲ್ಲಿ ಅಡಗಿರಬಹುದು ಎಂದು ಜರ್ದಾರಿ ಒಪ್ಪಿಕೊಂಡಿದ್ದರು.ಬ್ರಿಟನ್ ಪ್ರಧಾನಿ ಜಾರ್ಡನ್ ಬ್ರೌನ್ ಮತ್ತು ಭಾರತದ ತನಿಖಾದಳಗಳು ಮುಂಬಯಿ ದಾಳಿಕೋರರು ಪಾಕಿಸ್ತಾನೀಯರು ಎಂದು ದೃಢಪಡಿಸಿರುವ ಬಗ್ಗೆ ಪ್ರಶ್ನಿಸಿದಾಗ, "ತನಿಖೆ ಸತ್ಯವನ್ನು ಕಂಡು ಹುಡುಕುವ ಪ್ರಯತ್ನ. ಆದ್ದರಿಂದ ಯಾರು ಸಹ ತನಿಖೆ ಪೂರ್ಣಗೊಳ್ಳದೆ ಅಂತಿಮ ನಿರ್ಧಾರಕ್ಕೆ ತಲುಪುವುದು ಸಾಧ್ಯವಿಲ್ಲ, ಭಾರತದ ವಿದೇಶಿ ಸಚಿವರು ಸಹ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ" ಎಂದು ಉತ್ತರಿಸಿದರು." ನನ್ನ ಪ್ರಕಾರ ಸರಿಯಾದ ತನಿಖೆ ಮತ್ತು ಸೂಕ್ತ ಸಾಕ್ಷ್ಯಧಾರಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ವಿನಿಮಯವಾಗುವವರೆಗೆ ಯಾವುದೇ ನಿರ್ಣಯಕ್ಕೆ ಬರಲಾಗುವುದಿಲ್ಲ. ನಾವು ಜಂಟಿ ತನಿಖೆಗೆ ಮನವಿ ಮಾಡಿರುವುದರಿಂದ ಸಾಕ್ಷ್ಯಾಧಾರಗಳ ವಿನಿಮಯ ನಡೆಯುತ್ತದೆಂಬ ಭರವಸೆಯನ್ನು ನಾವು ಇಟ್ಟುಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್‌ನ ವ್ಯಕ್ತಿ ಬಂಧಿತ ಉಗ್ರ ಕಸಬ್‌ನನ್ನು ತನ್ನ ಮಗನೆಂದು ಗುರುತಿಸಿರುವ ಬಗ್ಗೆ ಪ್ರಶ್ನಿಸಿದಾಗ, "ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮಾಧ್ಯಮಗಳಲ್ಲಿ ವ್ಯತಿರಿಕ್ತ ವರದಿಗಳಿವೆ. ಕೆಲವರು ನೀವು ಹೇಳಿದಂತೆ ಹೇಳುತ್ತಿದ್ದಾರೆ ಇನ್ನು ಕೆಲವರು ಇದನ್ನು ನಿರಾಕರಿಸುತ್ತಿದ್ದಾರೆ. ಆದ್ದರಿಂದ ತನಿಖೆ ಪ್ರಗತಿಯಲ್ಲಿದೆ ಮತ್ತು ನಾನು ಈಗಲೇ ಅಂತಿಮ ನಿರ್ಣಯಕ್ಕೆ ಬರಲು ಇಚ್ಛಿಸುವುದಿಲ್ಲ" ಎಂದು ಉತ್ತರಿಸಿದ್ದಾರೆ.ಪಾಕಿಸ್ತಾನೀಯರು ದಾಳಿಗಳಲ್ಲಿ ಪಾತ್ರವಹಿಸಿರುವ ಬಗ್ಗೆ 'ಸಾಕಷ್ಟು' ಮಾಹಿತಿ ಲಭ್ಯವಾದಲ್ಲಿ ಇಸ್ಲಾಮಾಬಾದ್ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ಜರ್ದಾರಿ 'ಆಶ್ವಾಸನೆ' ನೀಡಿದ್ದಾರೆ.ಜಮಾತ್-ಉದ್-ದಾವಾ ಮುಖಂಡ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿಯೇ ಇರಿಸಲಾಗುತ್ತದೆ ಎಂದು ಜರ್ದಾರಿ ತಿಳಿಸಿದ್ದಾರೆ" ಅವನು ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗೀಯಾಗಿರುವುದು ತಿಳಿದುಬಂದರೆ ಆತನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ನಾನು ನಿಮಗೆ 'ಭರವಸೆ' ನೀಡುತ್ತೇನೆ" ಎಂದು ಜರ್ದಾರಿ ಹೇಳಿದ್ದಾರೆ.ಲಷ್ಕರೆ ತೊಯ್ಬಾ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿರುವುದನ್ನು ಪಾಕಿಸ್ತಾನಿ ಅಧ್ಯಕ್ಷ ನಿರಾಕರಿಸಿಲ್ಲ, "ನೀವು ಒಂದು ಸಂಘಟನೆಯನ್ನು ನಿಷೇಧಿಸಿದಾಗ ಅದು ಇನ್ನೊಂದು ರೂಪದಲ್ಲಿ ಮೇಲೆದ್ದು ಬರುತ್ತದೆ" ಎಂದು ಅವರು ಒಪ್ಪಿಕೊಂಡಿದ್ದಾರೆ.ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟ ಶಂಕಿತರ ವಿಚಾರಣೆ ನಡಸಲು ಬ್ರಿಟನ್‌ಗೆ ಅವಕಾಶ ನೀಡುವುದನ್ನು ತಾವು ಸಮರ್ಥಿಸುವುದಾಗಿ ನುಡಿದರು ಆದರೆ ಈ ಕುರಿತು ಅಂತಿಮ ನಿರ್ಣಯವನ್ನು ಪಾಕಿಸ್ತಾನದ ಸಂಸತ್ತಿನಲ್ಲಿ ಕೈಗೊಳ್ಳಲಾಗುವುದು ಎಂದಿದ್ದಾರೆ. |