ಪಾಕಿಸ್ತಾನದಲ್ಲಿ ಕೌರ್ಯ, ಅಕ್ರಮಗಳು ಎಷ್ಟರ ಮಟ್ಟಿಗೆ ಬೆಳೆದಿದೆಯೆನ್ನುವುದಕ್ಕೆ ಈ ಪ್ರಕರಣವೊಂದೇ ಸಾಕು. ವೈಯಕ್ತಿಕ ದ್ವೇಷಗಳನ್ನು ತೀರಿಸಿಕೊಳ್ಳಲು ಹಣ ಪಾವತಿ ಮಾಡಿದಲ್ಲಿ ಆತ್ಮಾಹುತಿ ದಾಳಿಕೋರರೂ ಇಲ್ಲಿ ಸುಲಭವಾಗಿ ಲಭ್ಯ, ಪಾಕ್ ಸಂಸದೀಯನ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಪಕ್ಷದ ಸಂಸದೀಯ ರಶೀದ್ ಅಕ್ಬರ್ ನುವಾನಿ ಅವರ ನಿವಾಸದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ನುವಾನಿ ಸೇರಿದಂತೆ 26 ಜನ ಸಾವಿಗೀಡಾಗಿದ್ದರು ಮತ್ತು ಆನೇಕರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಹೋರ್‌ನ ಅಪರಾಧ ತನಿಖಾ ವಿಭಾಗ 5 ಜನರನ್ನು ಬಂಧಿಸಿರುವುದಾಗಿ ಮಂಗಳವಾರ ತಿಳಿಸಿದೆ.
ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವೈರಿಗಾಳಗಿದ್ದ ಇಬ್ಬರು ಮಿತ್ರರ ಮನಸ್ತಾಪ ಪರಿಹರಿಸಲು ನುವಾನಿ ಪ್ರಾಮಾಣಿಕ ಮಧ್ಯವರ್ತಿಯಾಗಿದ್ದುದೇ ಅವರ ಪ್ರಾಣಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.
ತಾನು ವೈಶಮ್ಯ ಹೊಂದಿದ್ದ ಎಜಾಜ್ ಹುಸೈನ್ ಎಂಬಾತನನ್ನು ಹತ್ಯೆಗೈಯಲು ಪ್ರಸ್ತುತ ಬಂಧಿತನಾಗಿರುವ ವಾಕಾಸ್ ಹುಸೈನ್ ತನ್ನ ಸಹಚರರೊಡಗೂಡಿ ದಕ್ಷಿಣ ವಾಜರಿಸ್ತಾನದ ವಾನಾ ನಗರದಲ್ಲಿ ಒಬ್ಬ ಆತ್ಮಾಹುತಿ ದಾಳಿಕೋರನನ್ನು ನೇಮಿಸಿದ್ದ. ನುವಾನಿ, ಎಜಾಜ್ ಮತ್ತು ವಾಕಾಸ್ ನಡುವಿನ ವಿವಾದ ಪರಿಹರಿಸಲು ಎಜಾಜ್ ಕೋರಿಕೆ ಮೇರೆಗೆ ಮಧ್ಯವರ್ತಿಯಾಗಿದ್ದರು. ಇವರಿಬ್ಬರನ್ನು ತಮ್ಮ ಮನೆಗೆ ಕರೆಯಿಸಿ ಮಾತನಾಡಿದ ನುವಾನಿ ಅಗಸ್ಟ್ 6ರಂದು ಮತ್ತೆ ಭೇಟಿಯಾಗುವುದಾಗಿ ನಿಗದಿ ಪಡಿಸಿದ್ದರು.
ಎಜಾಜ್ ಅನ್ನು ಹತ್ಯೆ ಮಾಡಲು ನಿರ್ಧರಿಸಿದ ವಾಕಾಸ್ ಹುಸೈನ್ ಮತ್ತು ಸಹಚರರು ವಾನಾ ನಿವಾಸಿ ಜಾನ ಮಹಮ್ಮದ್ ವಾಜೀರ್‌ನನ್ನು ಭೇಟಿಯಾಗಿ ಹತ್ಯೆ ಮಾಡುವುದಕ್ಕೆ 1.2 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡರು.
ಘಟನೆ ನಡೆದ ದಿನ, ಅಗಸ್ಟ್ 6ರಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವಾಕಾಸ್, ನುವಾನಿ ಅವರ ನಿವಾಸದಲ್ಲಿ ಎಜಾಜ್ ಇರುವಿಕೆಯನ್ನು ದೃಢಪಡಿಸಿಕೊಂಡು ಆತ್ಮಾಹುತಿ ದಾಳಿಕೋರನನ್ನು ಅಲ್ಲಿಗೆ ಕರೆದೊಯ್ದ. ದಾಳಿಕೋರ ಎಜಾಜ್ ಬಳಿ ಹೋಗಿ ತನ್ನನ್ನು ತಾನೇ ಸ್ಪೋಟಿಸಿಕೊಳ್ಳುವುದರ ಮೂಲಕ ಎಜಾಜ್, ನುವಾನಿ ಸೇರಿದಂತೆ ಒಟ್ಟು 26 ಜನರನ್ನು ಬಲಿತೆಗೆದುಕೊಂಡ. |