ಭಾರತ ಮತ್ತು ಪಾಕಿಸ್ತಾನ ನಡುವೆ ಸಮರ ನಡೆಯುವ ಯಾವುದೇ ಸಾಧ್ಯತೆಗಳು ಇಲ್ಲ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಭವಿಷ್ಯ ನುಡಿದಿದ್ದಾರೆ.
ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿರುವುದಾಗಿ ಮಾಧ್ಯಮಗಳ ವರದಿ ಪ್ರಕಟಿಸುತ್ತಿರುವ ನಡುವೆಯೂ, ಎರಡೂ ದೇಶಗಳ ನಡುವೆ ಯುದ್ದ ನಡೆಯುವ ಸಾಧ್ಯತೆ ಇಲ್ಲ ಎಂದಿರುವ ಮುಷರ್ರಫ್, ಆ ನಿಟ್ಟಿನಲ್ಲಿ ಶಾಂತಿ ಮಾತುಕತೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.
ಆದರೆ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯವನ್ನು ಭಾರತ ತೋರಿಸಲಾರದು ಎಂದಿರುವ ಅವರು, ನಮ್ಮ ಸೈನಿಕ ಪಡೆಗಳು ಯಾವುದೇ ದಾಳಿಯನ್ನು ಎದುರಿಸಲು ಸಮರ್ಥವಾಗಿವೆ ಎಂದು ಮುಷ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಪಾಕಿಸ್ತಾನ ಸೈನಿಕ ಪಡೆಗಳು ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ದವಾಗಿದ್ದು, ಯಾವುದೇ ದಾಳಿ ಎದುರಿಸಲು ಸಿದ್ದ ಎಂದಿರುವ ಅವರು, ಆದರೆ ಭಾರತ ಪಾಕಿಸ್ತಾನದ ಮೇಲೆ ಸಮರ ನಡೆಸುವ ದುಸ್ಸಾಹಸಕ್ಕೆ ಕೈಹಾಕಲಾರದು ಎಂದಿದ್ದಾರೆ.
ಮಾಜಿ ವಿದೇಶಾಂಗ ಸಚಿವ ಕುಶಿದ್ ಮೊಹಮೂದ್ ಕಾಸೂರಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಮುಷ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |