ತನ್ನ ಬುಟ್ಟಿಯಲ್ಲಿ ಈಗಾಗಲೇ 53 ಗಿನ್ನೆಸ್ ದಾಖಲೆಗಳನ್ನು ಹಾಕಿಕೊಂಡಿರುವ ಶ್ರೀಲಂಕಾ ಮೂಲದ ಸುರೇಶ್ ಜೋಕಿಮ್ ಎಂಬಾತ, ಇದೀಗ ಸ್ಟಾಕ್‌ಹೋಂನಲ್ಲಿ ಮತ್ತೊಂದು ಗಿನ್ನೆಸ್ ದಾಖಲೆ ಮಾಡಿದ್ದಾನೆ. ಅದೆಂದರೆ ನಿರಂತರವಾಗಿ 72 ಗಂಟೆಗಳ ಕಾಲ (3 ದಿನ) ಎಡೆಬಿಡದೆ ಟೀವಿ ನೋಡಿ!
ನ್ಯೂಯಾರ್ಕ್‌ನಲ್ಲಿ ಕಳೆದ 2005ರಲ್ಲಿ ದಾಖಲಾಗಿದ್ದ 69 ಗಂಟೆ, 48 ನಿಮಿಷಗಳ ಟೀವಿ ವೀಕ್ಷಣೆಯ ದಾಖಲೆಯನ್ನು 39ರ ಹರೆಯದ ತಮಿಳುಭಾಷಿಗ ಜೋಕಿಮ್ ಮುರಿದಿದ್ದಾನೆ.
ಸ್ವೀಡನ್‌ನ ಎದುರಾಳಿಯೊಬ್ಬನೊಂದಿಗೆ ಸ್ಪರ್ಧಿಸುವಂತೆ ಅಲ್ಲಿನ ಟಿವಿ4 ನೆಟ್ವರ್ಕ್ ಕಂಪನಿಯು ಸುರೇಶ್ ಜೋಕಿಮ್‌ನನ್ನು ಆಹ್ವಾನಿಸಿತ್ತು. ನಾಟಕ ಸರಣಿಯೊಂದರ ಕಂತು ವೀಕ್ಷಿಸುತ್ತಾ, ಹಲವಾರು ಕಪ್ ಕಾಫಿ ಕುಡಿಯುತ್ತಲೇ ಆತ ಕಳೆದ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭಿಸಿದ ಟೀವಿ ವೀಕ್ಷಣೆಯನ್ನು ಭಾನುವಾರ ಸಂಜೆ ನಿಲ್ಲಿಸಿಬಿಟ್ಟಿದ್ದಾನೆ.
ಕಳೆದ ಮೂರು ವರ್ಷಗಳಲ್ಲಿ ಹಿಂದಿನ ದಾಖಲೆ ಮುರಿಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತಾದರೂ, ಯಾರು ಕೂಡ ಅದರಲ್ಲಿ ಯಶಸ್ವಿಯಾಗಿರಲಿಲ್ಲ.
ಅವರ ದಾಖಲೆಗಳ ಪಟ್ಟಿಯಲ್ಲಿರುವ ಇತರ ಸಾಹಸಗಳೆಂದರೆ, ಸುದೀರ್ಘ ಕರವೊಕೆ ಮ್ಯಾರಥಾನ್ (25 ಗಂಟೆ, 49 ನಿಮಿಷ), ಸುದೀರ್ಘ ರೇಡಿಯೋ ಪ್ರಸಾರ (120 ಗಂಟೆ), ಸುದೀರ್ಘ ಅವಧಿಗೆ ಒಂಟಿಕಾಲಿನಲ್ಲಿ ನಿಲ್ಲುವುದು (76 ಗಂಟೆ 40 ನಿಮಿಷ) ಮತ್ತು ಸುದೀರ್ಘ ಕಾಲ ಬಟ್ಟೆಗಳಿಗೆ ಇಸ್ತ್ರಿ ಮಾಡುವುದು (55 ಗಂಟೆ 5 ನಿಮಿಷ).
ಅಂತೆಯೇ ನಿರಂತರ 84 ಗಂಟೆಗಳ ಕಾಲ ಡ್ರಂ ಬಾರಿಸಿದ್ದಾರೆ, ನಿರಂತರ 168 ಗಂಟೆ ತುಳಿಯುವ ಚಕ್ರದ ಮೂಲಕ 659.27 ಕಿ.ಮೀ. ಕ್ರಮಿಸಿದ್ದಾರೆ, 168 ಗಂಟೆಗಳ ಕಾಲ ಬೌಲಿಂಗ್ ಮಾಡಿದ್ದಾರೆ, 4.5 ಕಿಲೋ ಇಟ್ಟಿಗೆಯನ್ನು 135.5 ಕಿ.ಮೀ. ಒಂದು ಕೈಯಲ್ಲಿ ಹೊತ್ತೊಯ್ದಿದ್ದಾರೆ, 56.62 ಕಿ.ಮೀ. ದೂರ ತೆವಳುತ್ತಾ ಸಾಗಿದ್ದಾರೆ, 24 ಗಂಟೆಗಳಲ್ಲಿ ಬಾಸ್ಕೆಟ್ಬಾಲ್ ಚೆಂಡನ್ನು ಪುಟಿಯುತ್ತಾ 156.71 ಕಿ.ಮೀ. ಕ್ರಮಿಸಿದ್ದಾರೆ, ನಿರಂತರವಾಗಿ 100 ಗಂಟೆ ನೃತ್ಯ ಮಾಡಿದ್ದಾರೆ, 24 ಗಂಟೆಗಳ ಕಾಲ ಮೂನ್ ವಾಕ್ ನೃತ್ಯ ಮಾಡಿದ್ದಾರೆ, 42 ಗಂಟೆ ನಿರಂತರ ಸಂಗೀತ ಕಾರ್ಯಕ್ರಮ ನೀಡಿದ್ದಾರೆ ಮತ್ತು 24 ಗಂಟೆಗಳಲ್ಲಿ ಕಾರೊಂದನ್ನು 19.2 ಕಿ.ಮೀ. ತಳ್ಳಿಕೊಂಡು ಹೋಗಿದ್ದಾರೆ. |