ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ
ಟಿಪ್ಪುಸುಲ್ತಾನನ ಖಡ್ಗವನ್ನು ಮರಳಿ ಭಾರತಕ್ಕೆ ತಂದ ಉದ್ಯಮಿ ವಿಜಯ್ ಮಲ್ಯ, ನ್ಯೂಯಾರ್ಕಿನಲ್ಲಿ ನಡೆದ ಹರಾಜಿನಲ್ಲಿ ಮಹಾತ್ಮಾ ಗಾಂಧೀಜಿಯವರ ಖಾಸಗಿ ವಸ್ತುಗಳನ್ನು ಖರೀದಿಸಿದ್ದಾರೆ. ಗಾಂಧೀಜಿಯವರ ಲಾಂಛನವೆಂಬಂತಹ ಲೋಹದ ಫ್ರೇಮಿನ ಕನ್ನಡಕ ಸೇರಿದಂತೆ ಅವರ ಖಾಸಗಿ ವಸ್ತುಗಳನ್ನು ಹರಾಜಿನಲ್ಲಿ ಭಾರತೀಯ ಮದ್ಯದ ದೊರೆ ವಿಜಯ್ ಮಲ್ಯ ಅವರು 1.8 ದಶಲಕ್ಷ ಡಾಲರ್‌ಗೆ (ಸುಮಾರು 9 ಕೋಟಿ ರೂಪಾಯಿ) ಖರೀದಿಸಿದ್ದಾರೆ.

ವಿವಾದಗಳ ಹಿನ್ನೆಲೆಯಲ್ಲಿ ತಾನು ಗಾಂಧೀಜಿಯವರ ಈ ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂಬುದಾಗಿ ವಸ್ತುಗಳ ಮಾಲಕ ಜೇಮ್ಸ್ ಒಟಿಸ್ ಅವರು ಆಂಟಿಕೊರಂ ಆಕ್ಷನರ್ಸ್ ಆಕ್ಷನ್‌ಹೌಸ್‌ನ ಹೊರಗಡೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖರೀದಿಯು ಅಂತಿಮಗೊಳ್ಳಲು ಎರಡು ವಾರಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಯಾವುದೇ ಕ್ಲೇಮುಗಳನ್ನು ಪರಿಹರಿಸಲು ಈ ವಸ್ತುಗಳನ್ನು ಎರಡು ವಾರಗಳ ಕಾಲ ಹರಾಜುದಾರರ ಬಳಿಯೇ ಇರಿಸಿಕೊಳ್ಳಲಾಗುವುದು ಎಂಬುದಾಗಿ ಹರಾಜುದಾರ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇದರಿಂದಾಗಿ ಮಲ್ಯ ರಾಷ್ಟ್ರಪಿತನ ವಸ್ತುಗಳನ್ನು ವಶಕ್ಕೆ ಪಡೆಯಲು ಇನ್ನೂ ಎರಡು ವಾರಗಳ ಕಾಲ ಕಾಯಬೇಕು. ಬಳಿಕ ಅವರು ವಸ್ತುಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವರೆಂದು ನಿರೀಕ್ಷಿಸಲಾಗಿದೆ.

ಮಲ್ಯ ಅವರ ಪರವಾಗಿ ಟೋನಿ ಬೇಡಿ ಅವರು ಬಿಡ್ ಮಾಡಿದ್ದರು. ಅವರು ಈ ಬಿಡ್ ಅನ್ನು 'ರಾಷ್ಟ್ರಕ್ಕಾಗಿ ಬಿಡ್' ಎಂದಿದ್ದು, ಈ ಮಾರಾಟವೆಂದರೆ ಗಾಂಧೀಜಿ ವಸ್ತುಗಳು ರಾಷ್ಟ್ರಕ್ಕೆ ಮರಳಿಕೆ ಎಂದಿದ್ದಾರೆ.

'ಸ್ವತಂತ್ರ ಭಾರತದ ದೃಷ್ಟಿಯನ್ನು ನೀಡಿತು' ಎಂಬುದಾಗಿ ಗಾಂಧೀಜಿ ಒಂದೊಮ್ಮೆ ಹೇಳಿದ್ದ ಅವರ ಟ್ರೇಡ್‌ಮಾರ್ಕ್ ಎಂಬಂತಹ ಕನ್ನಡಕ, ಅವರು ಬಳಸಿದ್ದ ಒಂದು ಜತೆ ಚಪ್ಪಲಿಗಳು, ಅವರ ಜೆನಿತ್ ಪಾಕೀಟು ವಾಚು(ಸುಮಾರು 1920ರಲ್ಲಿ ತಯಾರಿತ), ಒಂದು ತಟ್ಟೆ ಹಾಗೂ ಬೋಗುಣಿಯನ್ನು ಶುಕ್ರವಾರ ಮುಂಜಾವಿನ ವೇಳೆ ಹಾರಾಜುಹಾಕಲಾಗಿತ್ತು.

ವಸ್ತುಗಳು ಹರಾಜಿನಲ್ಲಿ ವಿಜಯ್ ಮಲ್ಯ ಪಾಲಾಗಿದ್ದು, ಇವುಗಳು ಭಾರತಕ್ಕೆ ಮರಳುತ್ತವೆ ಎಂಬುದು ಖಚಿತವಾದಾಗ, ಹೆಚ್ಚಿನ ಸಂಸ್ಯೆಯಲ್ಲಿ ಭಾರತೀಯ ಅಮೆರಿಕನ್ನರು ತುಂಬಿದ್ದ ಹರಾಜು ಕೊಠಡಿಯಲ್ಲಿ ಹರ್ಷ ಭುಗಿಲೆದ್ದಿದ್ದು, ಕರತಾಡನ ಮುಗಿಲುಮುಟ್ಟಿತ್ತು.

ವಿಜಯ್ ಮಲ್ಯ ಹಾಗೂ ಭಾರತೀಯ ಸಂಜಾತ ಹೊಟೇಲಿಗ ಸಂತಾ ಸಿಂಗ್ ಚತ್ವಾಲ್ ಅವರು ಬಿಡ್ ಮಾಡುವ ಮೂಲಕ ಪರಸ್ಪರ ತಿಳುವಳಿಕೆ ಮಾಡಿಕೊಂಡಿದ್ದರು. ಅವರು ಪರಸ್ಪರ ವಿರೋಧವಾಗಿ ಬಿಡ್ ಮಾಡಬಾರದು ಎಂದು ನಿರ್ಧರಿಸಿದ್ದರು ಮತ್ತು ಬಿಡ್ ನಡೆಯುತ್ತಿರುವಾಗ ಫೋನ್ ಮೂಲಕ ಸಂಪರ್ಕದಲ್ಲಿದ್ದರು.

ನಾಲ್ಕುವರ್ಷಗಳ ಹಿಂದೆ ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್ ಬಳಸಿದ್ದ ಖಡ್ಗವನ್ನು ಹರಾಜು ಹಾಕಿದ್ದಾಗಲೂ, ವಿಜಯ್ ಮಲ್ಯ ಅವರು ಅದನ್ನು ನಾಲ್ಕುಕೋಟಿ ನೀಡಿ ಖರೀದಿಸಿ ಮರಳಿ ಭಾರತಕ್ಕೆ ತಂದಿದ್ದರು.

2007ರಲ್ಲಿ ಗಾಂಧೀಜಿಯವರ ಕೈಬರಹದ ಲೇಖನವೊಂದು ಹರಾಜಿಗೆ ಸಿದ್ಧವಾಗಿದ್ದಾಗ, ಹರಾಜುದಾರರ ಮನಒಲಿಸಿ ಮಾರಾಟಮಾಡದಂತೆ ತಡೆದು ಇದನ್ನು ಭಾರತಕ್ಕೆ ತರಲಾಗಿತ್ತು.

ಗಾಂಧೀಜಿಯವರ ಖಾಸಗೀ ವಸ್ತುಗಳನ್ನು ಹೊಂದಿದ್ದ ಒಟಿಸ್, ವಸ್ತುಗಳನ್ನು ಹರಾಜು ಹಾಕದಿರಲು ಹೊಸ ಷರತ್ತುಗಳನ್ನು ಹಾಕಿದ್ದು, ಈ ಕುರಿತು ಸಾಕಷ್ಟು ಬೆಳವಣಿಗೆಗಳು ಮತ್ತು ತಿರುವುಗಳು ಕಂಡು ಬಂದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್: ಗಣಿ ಕುಸಿತ
ಕದನ ವಿರಾಮ ಇಲ್ಲ: ಲಂಕಾ
ದಾಳಿಕೋರನ ಗುರುತು ಪತ್ತೆ ಹಚ್ಚಲಾಗಿದೆ: ಪಾಕ್
ಗಾಂಧಿ ಖಾಸಗಿ ವಸ್ತು ಹರಾಜು ರದ್ದು ಮಾತುಕತೆ ವಿಫಲ
ದಾಳಿ ಬಗ್ಗೆ ಪಾಕ್‌ಗೆ ಮೊದಲೇ ಮಾಹಿತಿ ಇತ್ತು !
ಹರಾಜಿನಲ್ಲಿ ಗಾಂಧಿ ರಕ್ತದ ಮಾದರಿ-ಬೂದಿ ಸೇರಿದೆ: ಒಟಿಸ್