ಸಿಂಗಪುರ ಪೊಲೀಸರ ನೆರವಿನಿಂದ ನಾಟಕೀಯ ರೀತಿಯಲ್ಲಿ ತಪ್ಪಿಸಿಕೊಂಡ ಅಮೆರಿಕ-ಇಂಡೊನೇಶಿಯ ರೂಪದರ್ಶಿಯೊಬ್ಬಳು ಮಲೇಶಿಯ ರಾಜಕುಮಾರನ ಚಿತ್ರಹಿಂಸೆ, ಅತ್ಯಾಚಾರ ಮತ್ತು ದೌರ್ಜನ್ಯದ ಕಥೆಗಳೊಂದಿಗೆ ಇಂಡೋನೇಶಿಯದಲ್ಲಿರುವ ತನ್ನ ಕುಟುಂಬದೊಂದಿಗೆ ಸೇರಿದ್ದಾಳೆ. ಮಲೇಶಿಯ ಕೆಲಾಂಟನ್ ರಾಜ್ಯದ ರಾಜಕುಮಾರನನ್ನು ವಿವಾಹವಾದ ಬಳಿಕ ತನ್ನನ್ನು ಲೈಂಗಿಕ ಗುಲಾಮಳಂತೆ ಬಳಸಿಕೊಳ್ಳಲಾಯಿತು ಎಂದು ಮನೋಹರಾ ಒಡೆಲಿಯ ಪಿನೊ(17 ವರ್ಷ) ವರದಿಗಾರರಿಗೆ ದೂರಿದ್ದಾಳೆ.
ಅರಮನೆಯಲ್ಲಿ ತನ್ನ ಜೀವನ ನರಕಸದೃಶವಾಗಿ ನಿರಂತರ ಅತ್ಯಾಚಾರ, ದೌರ್ಜನ್ಯ, ಚಿತ್ರಹಿಂಸೆ ಮತ್ತು ಆಗಾಗ್ಗೆ ಮಾದಕವಸ್ತು ಚುಚ್ಚುಮದ್ದುಗಳಿಂದ ರಕ್ತವಾಂತಿ ಮಾಡಿಕೊಂಡಿದ್ದಾಗಿ ಅವರು ಆರೋಪಿಸಿದ್ದಾರೆ. ಈ ದೌರ್ಜನ್ಯವನ್ನು ಮುಚ್ಚಿಹಾಕಲು ಮಲೇಶಿಯ ಮತ್ತು ಇಂಡೋನೇಶಿಯ ಸರ್ಕಾರ ಯತ್ನಿಸುತ್ತಿದ್ದು, ರಾಜಕುಮಾರನ ವಿರುದ್ಧ ಕ್ರಮಕ್ಕೆ ಒತ್ತಡ ಹೇರುವುದಾಗಿ ಮನೋಹರಾ ತಾಯಿ ಡೈಸಿ ಫಜಾರಿನಾ ತಿಳಿಸಿದ್ದಾರೆ.
'ತಾವು ಬಯಪಟ್ಟಿದ್ದ ಸಂಗತಿ ನಿಜವೆಂದು ತಿಳಿದುಬಂದಿದೆ.ಮನೋಹರಾ ದೈಹಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಾಳೆ. ಆಕೆಯ ಎದೆಯ ಮೇಲೆ ರೇಜರ್ನಿಂದ ಗಾಯಮಾಡಿದ ಗುರುತುಗಳಿವೆ' ಎಂದು ಫಜಾರಿನಾ ಸೋಮವಾರ ತಿಳಿಸಿದ್ದಾರೆ. ಮಲೇಶಿಯ ಸರ್ಕಾರ ತಮ್ಮ ಪುತ್ರಿಯನ್ನು ನೋಡಲು ಅವಕಾಶ ನೀಡಬೇಕೆಂಬ ಮನವಿಯನ್ನು ಮಲೇಶಿಯ ಸರ್ಕಾರ ಕಡೆಗಣಿಸಿ ಪ್ರವೇಶ ನಿರಾಕರಿಸಿತೆಂದು ಅವರು ಹೇಳಿದ್ದು, ಮನೋಹರ ತಮ್ಮ ಪತಿಯ ಜತೆ ಸುಖವಾಗಿದ್ದಾರೆಂದು ಇಂಡೋನೇಶಿಯ ರಾಯಭಾರ ಕಚೇರಿ ತಿಳಿಸಿತ್ತು.. |