ತಾಲಿಬಾನ್ ಹೆಜ್ಜೆಗುರುತನ್ನು ಅನುಸರಿಸಿರುವ ಪಾಕಿಸ್ತಾನದ ಕೈಬರ್ ಬುಡಕಟ್ಟು ಪ್ರದೇಶದ ನಿಷೇಧಿತ ಉಗ್ರಗಾಮಿ ಸಂಘಟನೆಯು ಆ ಪ್ರದೇಶದಲ್ಲಿ ವಾಸಿಸುವ ಸಿಖ್ಖರು ಮತ್ತು ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತರಿಗೆ ಧಾರ್ಮಿಕ ತೆರಿಗೆ ಅಥವಾ ಜಝಿಯ ಹೇರಿದೆ.
ಒಂದು ವರ್ಷದ ಹಿಂದೆ ಪಾಕಿಸ್ತಾನ ಫೆಡರಲ್ ಸರ್ಕಾರ ನಿಷೇಧಿಸಿದ ಲಷ್ಕರೆ ಇಸ್ಲಾಂ ಸಂಘಟನೆ ಅಲ್ಪಸಂಖ್ಯಾತ ಸಮುದಾಯದ ಪ್ರತಿ ಮುಸ್ಲಿಮೇತರ ವ್ಯಕ್ತಿಗೆ 1000 ರೂ. ಜಝಿಯ ತೆರಿಗೆ ಪಾವತಿ ಮಾಡುವಂತೆ ಅಥವಾ ಕೈಬರ್ ಏಜನ್ಸಿಯನ್ನು ತ್ಯಜಿಸುವಂತೆ ಆದೇಶಿಸಿದೆ.
ಲಷ್ಕರೆ ಇಸ್ಲಾಂ ಮುಖ್ಯಸ್ಥ ಮಂಗಲ್ ಭಾಗ್ ಮತ್ತು ಸಿಖ್ ನಿಯೋಗದ ನಡುವೆ ಮಾತುಕತೆಯಲ್ಲಿ ತೆರಿಗೆ ಪಾವತಿಗೆ ಮಂಗಳವಾರ ನಿರ್ಧರಿಸಲಾಯಿತು. ತೆರಿಗೆ ಪಾವತಿಸಿದರೆ ಯಾವುದೇ ಬೆದರಿಕೆಯಿಂದ ಸಿಖ್ಖರನ್ನು ರಕ್ಷಿಸುವುದಾಗಿ ಮಂಗಲ್ ಭಾಗ್ ಸಿಖ್ಖರಿಗೆ ತಿಳಿಸಿದ್ದಾನೆ. ಟಿರಾ ಕಣಿವೆಯಲ್ಲಿ ಬುಡಕಟ್ಟು ಮಂಡಳಿ ಅಥವಾ ಜಿರ್ಗಾ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಮತ್ತು ಹಿರಿಯರು ಸೇರಿದ್ದು, ಅವರು ಕೂಡ ತೆರಿಗೆ ಪಾವತಿಗೆ ಸಮ್ಮತಿಸಿದ್ದಾರೆ.
ತೆರಿಗೆ ಪಾವತಿಯಿಂದ ಮಹಿಳೆಯರು, ಅಂಗವಿಕಲ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ.ಸಿಖ್ಖರು, ಹಿಂದುಗಳು ಮತ್ತು ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಜನರು ಧಾರ್ಮಿಕ ತೆರಿಗೆ ಪಾವತಿ ಮಾಡಲು ಒಪ್ಪಿದ್ದಾರೆ.
ತಾಲಿಬಾನ್ ಕಮಾಂಡರ್ ಹಕೀಮುತ್ ಮೆಹಸೂದ್ ವಿಧಿಸಿದ್ದ ಜಾಝಿಯ ತೆರಿಗೆ ಪಾವತಿಗೆ ಸಿಖ್ ಕುಟುಂಬಗಳು ವಿಫಲವಾದ ಬಳಿಕ ಪಾಕಿಸ್ತಾನದ ಅರ್ಕಾಜಾಯ್ ಬುಡಕಟ್ಟು ಪ್ರದೇಶದಿಂದ ಹತ್ತಾರು ಸಿಖ್ ಕುಟುಂಬಗಳನ್ನು ಮನೆಗಳನ್ನು ತ್ಯಜಿಸಿದ್ದು, ಹಸನಾಬ್ದಾಲ್ ಪಂಜಾ ಸಾಹಿಬ್ ಗುರುದ್ವಾರದಲ್ಲಿ ಅವರಲ್ಲಿ ಬಹುತೇಕ ಮಂದಿ ಆಶ್ರಯ ಪಡೆದಿದ್ದರು. |