ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಸ್ಲಿಮರ ವಿರೋಧಿಯಾಗಿದ್ದು, ಅವರ ಪಾಕಿಸ್ತಾನ ನೀತಿಯು ಅಮೆರಿಕದ ವಿರುದ್ಧ ದ್ವೇಷ ಮತ್ತು ಪ್ರತೀಕಾರದ ಹೊಸ ಬೀಜ ಬಿತ್ತಿದೆಯೆಂದು ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಆರೋಪಿಸಿದ್ದಾನೆ.
ಅಮೆರಿಕದ ಅಧ್ಯಕ್ಷರು ಸೌದಿ ಅರೇಬಿಯಕ್ಕೆ ಕಾಲಿರಿಸಿದ ಸ್ವಲ್ಪ ಹೊತ್ತಿನಲ್ಲೇ ಅಲ್ ಜಜೀರಾದಲ್ಲಿ ಪ್ರಸಾರವಾದ ಟೇಪ್ನಲ್ಲಿ ಮಾತನಾಡಿದ ಒಸಾಮಾ, ಅಮೆರಿಕ ಅಧ್ಯಕ್ಷ ಒಬಾಮಾ ತನ್ನ ಪೂರ್ವಾಧಿಕಾರಿ ಜಾರ್ಜ್ ಡಬ್ಲ್ಯು ಬುಷ್ ಅವರ ಮಾದರಿಯಲ್ಲಿ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಟೀಕಿಸಿದ್ದಾನೆ.
ಮುಸ್ಲಿಂ ವಿರೋಧಿ ಧೋರಣೆ ತಾಳುವ ಮೂಲಕ ಸುದೀರ್ಘ ಯುದ್ಧಗಳಿಗೆ ಅಡಿಪಾಯ ಹಾಕುತ್ತಿದ್ದಾರೆಂದು ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರಗಾಮಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಉದ್ದೇಶಿಸಿ ಲಾಡೆನ್ ಹೇಳಿದ್ದಾನೆ.
ಒಬಾಮಾ ಈಜಿಪ್ಟ್ಗೆ ಗುರುವಾರ ಭೇಟಿ ನೀಡುವುದಕ್ಕೆ ಮುನ್ನ ಈ ಸಂದೇಶವನ್ನು ಒಸಾಮಾ ನೀಡಿದ್ದಾನೆ.ಟೇಪ್ನಲ್ಲಿ ದಾಳಿಗಳು, ವಿನಾಶಗಳನ್ನು ಉದಾಹರಿಸಿದ ಬಿನ್ ಲಾಡೆನ್,ಸ್ವಾತ್ನಲ್ಲಿ ಷರಿಯತ್ ಕಾನೂನು ಜಾರಿಗೆ ತರದಂತೆ ತಪ್ಪಿಸಬೇಕೆಂದು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿಗೆ ಒಬಾಮಾ ಆದೇಶವನ್ನು ನೀಡಿದ್ದಾರೆಂದು ಹೇಳಿದ್ದಾನೆ. |