ಪಾಕಿಸ್ತಾನದ ಪೇಶಾವರ್ನ ಐಶಾರಾಮಿ ಹೋಟೆಲ್ ಮೇಲೆ ನಡೆದ ಆತ್ಮಾಹುತಿ ದಾಳಿಗೆ 16 ಮಂದಿ ಬಲಿಯಾಗಿ 57 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕನಿಷ್ಟ ಇಬ್ಬರು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದು ಭಧ್ರತಾ ಸಿಬ್ಬಂದಿಗಳತ್ತ ಗುಂಡಿನ ದಾಳಿ ನಡೆಸುತ್ತಾ ಸ್ಫೋಟಕಗಳನ್ನು ತುಂಬಿದ ಟ್ರಕ್ನ್ನು ಪಂಚತಾರಾ ಹೋಟೆಲ್ ಪರ್ಲ್ ಕಾಂಟಿನೆಂಟಲ್ ಆವರಣದೊಳಗೆ ನುಗ್ಗಿಸಿ ಸ್ಫೋಟಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಮೃತರಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು 57 ಮಂದಿ ಗಾಯಗೊಂಡಿದ್ದಾರೆ. ಆದರೆ ಹೋಟೆಲ್ನ ಒಂದು ಭಾಗ ಸಂಪೂರ್ಣ ನಾಶವಾಗಿ ಕುಸಿದಿದ್ದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಗಫೂರ್ ಆತಂಕ ವ್ಯಕ್ತಪಡಿಸಿದ್ದಾರೆ.
ಹೋಟೆಲ್ನ ವ್ಯವಸ್ಥಾಪಕ ಸೇರಿದಂತೆ ಮೂವರು ವ್ಯಕ್ತಿಗಳು ಕಾಣೆಯಾಗಿದ್ದು ಕುಸಿದ ಕಟ್ಟದೊಳಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆರ್ಬಿಯಾದ ಅಲೆಕ್ಸಾಂಡರ್ ಮತ್ತು ಫಿಲಿಪಿನಾ ಅವರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧ ಪಾಕ್ ಸೇನಾ ಕಾರ್ಯಾಚರಣೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ತಾಲಿಬಾನ್ ಉಗ್ರರು ಪ್ರಸಕ್ತ ತಿಂಗಳಲ್ಲಿ ಏಳನೇ ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. |