ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿಯಲ್ಲಿ ಭಾಗಿಯಾದ ಉಗ್ರಗಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್ ಸ್ಟೇಡಿಯಂಗೆ ತೆರಳುತ್ತಿದ್ದ ಶ್ರೀಲಂಕಾ ಕ್ರಿಕೆಟ್ ತಂಡವಿದ್ದ ಬಸ್ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ 6 ಪೊಲೀಸ್ ಗಾರ್ಡ್ ಮತ್ತು ಚಾಲಕ ಸೇರಿದಂತೆ 7 ಪಾಕಿಸ್ತಾನಿಯರು ಹತರಾಗಿದ್ದರು. 7 ಮಂದಿ ದಾಳಿಕೋರರನ್ನು ಗುರುತಿಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆಯೆಂದು ಲಾಹೋರ್ ಪೊಲೀಸ್ ಮುಖಂಡ ಪರ್ವೇಜ್ ರಾಥೋರ್ ತಿಳಿಸಿದ್ದಾರೆ.
ಮೊಬೈಲ್ ಫೋನ್ ದಾಖಲೆಯ ಆಧಾರದ ಮೇಲೆ ಶಂಕಿತನನ್ನು ಲಾಹೋರ್ನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ತಾಲಿಬಾನ್ ಭದ್ರಕೋಟೆ ಮಕೀನ್ನಲ್ಲಿ ಅವನಿಗೆ ಆತ್ಮಾಹುತಿ ದಾಳಿ ನಡೆಸುವುದಕ್ಕಾಗಿ ತರಬೇತಿ ನೀಡಲಾಗಿತ್ತೆಂದು ಪೊಲೀಸರು ಹೇಳಿದ್ದಾರೆ. ಜುಬೈರ್ ಎಂದು ಪೊಲೀಸರು ಗುರುತಿಸಿರುವ ಶಂಕಿತ ಉಗ್ರನು ತನ್ನ ಗುರುತು ಸಿಗದಂತೆ ಕಂಬಳಿಯಿಂದ ಮುಖಮುಚ್ಚಿಕೊಂಡು ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡನೆಂದು ಹೇಳಲಾಗಿದೆ.
ಅವನು ದಾಳಿಗೆ ಎರಡು ದಿನ ಮುಂಚಿತವಾಗಿ ಲಾಹೋರ್ಗೆ ಆಗಮಿಸಿದ್ದ. ದಾಳಿಯನ್ನು ಸಂಘಟಿಸಿದ್ದ ಅಖೀಲ್ ಎಂಬವನ ಜತೆ ಅವನು ಸಣ್ಣ ಕೋಣೆಯೊಂದರಲ್ಲಿ ವಾಸವಿದ್ದಿದ್ದಾಗಿ ಅವನು ತನಿಖೆಯಲ್ಲಿ ತಿಳಿಸಿದ್ದಾನೆ. |