ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಿಡುಗಡೆ ಮಾಡಬೇಕೆಂಬ ಮೇಲ್ಮನವಿಯನ್ನು ಸಾಕ್ಷ್ಯಾಧಾರದ ಕೊರತೆಯ ಆಧಾರದ ಮೇಲೆ ಪ್ರಾಂತೀಯ ಪಂಜಾಬ್ ಸರ್ಕಾರ ಮಂಗಳವಾರ ಹಿಂಪಡೆದಿದೆ. ಒಂದು ಕಡೆ ಸಯೀದ್ ಬಿಡುಗಡೆಗೆ ಕೋರಿಕೆ ಸಲ್ಲಿಸಿದ್ದ ಪಾಕಿಸ್ತಾನ ಸರ್ಕಾರ ಇನ್ನೊಂದು ಕಡೆ ಇಬ್ಬಗೆಯ ನೀತಿ ಅನುಸರಿಸುತ್ತಾ ಡಬಲ್ ಗೇಮ್ ಆಡುತ್ತಿದೆಯೆಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.
ಭಾರತ ಮಾತ್ರ ಮುಂಬೈ ಭಯೋತ್ಪಾದನೆಗೆ ಕಾರಣಕರ್ತರಾದವರಿಗೆ ಸೂಕ್ತ ಶಿಕ್ಷೆ ವಿಧಿಸುವ ತನಕ ಪಾಕ್ ಜತೆ ಯಾವುದೇ ಫಲಪ್ರದ ಮಾತುಕತೆ ಸಾಧ್ಯವಿಲ್ಲವೆಂದು ತಿಳಿಸಿದೆ. ಆದರೆ ಪಾಕಿಸ್ತಾನ ಮಾತ್ರ ಒಂದು ಕಡೆ ಯಾವುದೇ ದೃಢ ಸಾಕ್ಷ್ಯಗಳನ್ನು ಒದಗಿಸದೇ ನೆಪಮಾತ್ರಕ್ಕೆ ಅರ್ಜಿ ಸಲ್ಲಿಸಿ ದ್ವಂದ್ವ ನೀತಿ ಅನುಸರಿಸುತ್ತಿದೆಯೆಂದು ಹೇಳಲಾಗಿದೆ. ಪಾಕಿಸ್ತಾನದ ಫೆಡರಲ್ ಸರ್ಕಾರ 26/11 ಭಯೋತ್ಪಾದನೆ ದಾಳಿ ಪ್ರಕರಣದಲ್ಲಿ ಸಯೀದ್ ವಿರುದ್ಧ ಆರೋಪ ರುಜುವಾತು ಮಾಡುವ ಯಾವುದೇ ಸಾಕ್ಷ್ಯಾಧಾರವನ್ನು ನೀಡಿಲ್ಲವೆಂದು ಪ್ರಾಂತೀಯ ಸರ್ಕಾರ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜೆಯುಡಿ ಮುಖ್ಯಸ್ಥರನ್ನು ಗೃಹಬಂಧನದಿಂದ ಬಿಡುಗಡೆ ಮಾಡಬೇಕೆಂಬ ಕೋರಿಕೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಕ್ಕೆ ಕಾರಣವೆಂದು ಅದು ಹೇಳಿದೆ. ಮುಂಬೈ ಭಯೋತ್ಪಾದನೆ ದಾಳಿ ಪ್ರಕರಣದ ಮುಖ್ಯ ಆರೋಪಿ ಸಯೀದ್ ಬಂಧನಕ್ಕೆ ದೃಢ ಸಾಕ್ಷ್ಯಗಳನ್ನು ನೀಡುವಂತೆ ಪಾಕಿಸ್ತಾನ ಸುಪ್ರೀಂಕೋರ್ಟ್ ಕೇಳಿದ್ದರಿಂದ ಪಂಜಾಬ್ ಸರ್ಕಾರ ಅಪೀಲಿನಿಂದ ಹಿಂದೆ ಸರಿದಿದೆ.ಪಂಜಾಬ್ ಸರ್ಕಾರವು ಲಾಹೋರ್ ಹೈಕೋರ್ಟ್ ಆದೇಶದ ವಿರುದ್ಧ ಎರಡು ಆಧಾರಗಳ ಮೇಲೆ ಅರ್ಜಿ ಸಲ್ಲಿಸಿತ್ತೆಂದು ಅಡ್ವೊಕೇಟ್ ಜನರಲ್ ಮುಹಮದ್ ರಾಜಾ ಫರೂಕ್ ಸೋಮವಾರದ ವಿಚಾರಣೆಯಲ್ಲಿ ತಿಳಿಸಿದರು. ಒಂದು ಜೆಯುಡಿ ಮೇಲೆ ನಿರ್ಬಂಧಗಳನ್ನು ಹೇರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಪಾಲನೆ ಮತ್ತು ಇನ್ನೊಂದು ಸಯೀದ್ ಮತ್ತು ಅವರ ನಿಕಟವರ್ತಿ ಕರ್ನಲ್(ನಿವೃತ್ತ) ನಾಜಿರ್ ಅಹ್ಮದ್ ವಿರುದ್ಧ ಗೋಪ್ಯ ಸಾಕ್ಷ್ಯದ ಆಧಾರಗಳ ಮೇಲೆ ಅರ್ಜಿ ಸಲ್ಲಿಸಿದೆ.
ಸಯೀದ್ ಚಲನವಲನಗಳ ಬಗ್ಗೆ ವಿಶ್ವಸಂಸ್ಥೆ ನಿರ್ಣಯದಲ್ಲಿ ಮಾತ್ರ ನಿರ್ಬಂಧಗಳನ್ನು ವಿಧಿಸಿದೆಯೆಂದು ಅಭಿಪ್ರಾಯಪಟ್ಟ ಪೀಠ, ಯಾವುದೇ ಸಾಕ್ಷ್ಯಾಧಾರವಿಲ್ಲದೇ ವ್ಯಕ್ತಿಯ ಸ್ವಾತಂತ್ರ್ಯವನ್ನು ಸರ್ಕಾರ ಮೊಟಕು ಮಾಡುವಂತಿಲ್ಲವೆಂದು ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು. ಸಯೀದ್ ಬಂಧನದ ಕೋರಿಕೆಯನ್ನು ದೃಢ ಸಾಕ್ಷ್ಯಗಳ ಆಧಾರದ ಮೇಲೆ ಸಮರ್ಥಿಸಿಕೊಳ್ಳುವಂತೆ ಪೀಠವು ಫರೂಕ್‌ಗೆ ತಿಳಿಸಿದೆ. |