ಪಾಕಿಸ್ತಾನದ ವಿವಿಧೆಡೆ ಭಯೋತ್ಪಾದನಾ ಚಟುವಟಿಕೆ ಹೆಚ್ಚಳವಾಗುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿರುವ ಮಾಜಿ ಮಿಲಿಟರಿ ಆಡಳಿತಗಾರ ಪರ್ವೆಜ್ ಮುಷರ್ರಫ್, ಆ ನಿಟ್ಟಿನಲ್ಲಿ ಮುಜಾಹಿದೀನ್ ಸಂಘಟನೆ ಹೆಚ್ಚಿನ ಸಾರ್ವಜನಿಕ ಬೆಂಬಲ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಧಾರ್ಮಿಕ ಉಗ್ರರು ಕೂಡ ಪೂರ್ಣ ಪ್ರಮಾಣವಾಗಿ ಸಕ್ರಿಯವಾಗಿರುವುದಾಗಿ ಅವರು ನೈಜೀರಿಯಾದ ರಾಜಧಾನಿ ಲಾಗೋಸ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮುಜಾಹಿದೀನ್ ಸಂಘಟನೆ ಕಾಶ್ಮೀರ ಪ್ರದೇಶ ಸೇರಿದಂತೆ ಪಾಕಿಸ್ತಾನದಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ಜನ ಬೆಂಬಲ ಪಡೆಯುತ್ತಿದೆ. ಇದರಿಂದಾಗಿ ಮುಂದೆ ಭಯೋತ್ಪಾದನೆಯನ್ನು ತಡೆಗಟ್ಟಲು ತುಂಬಾ ಕಠಿಣವಾಗಲಿದೆ ಎಂದರು.
ಅಲ್ಲದೆ, ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ತಾನ ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಉಗ್ರಗಾಮಿ ಚಟುವಟಿಕೆಯನ್ನು ಮಟ್ಟಹಾಕಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.