ವಿಕಿಲೀಕ್ಸ್ ದಾಖಲೆ ಹೊರಹಾಕ್ಬಹುದು; ಭಾರತಕ್ಕೆ 'ದೊಡ್ಡಣ್ಣ'
ನ್ಯೂಯಾರ್ಕ್, ಶನಿವಾರ, 27 ನವೆಂಬರ್ 2010( 18:43 IST )
ವಿಕಿಲೀಕ್ಸ್ ಮತ್ತಷ್ಟು ಹೊಸ ದಾಖಲೆಗಳನ್ನು ಹೊರಹಾಕುವ ಸಾಧ್ಯತೆ ಇರುವುದಾಗಿ ಭಾರತ ಸೇರಿದಂತೆ ಜಗತ್ತಿನ ಕೆಲವು ದೇಶಗಳಿಗೆ ಅಮೆರಿಕ ಸ್ಪಷ್ಟ ಎಚ್ಚರಿಯನ್ನು ನೀಡಿದೆ.
ವಿಕಿಲೀಕ್ಸ್ ಮತ್ತೆ ಬಹಳಷ್ಟು ಮಾಹಿತಿಯನ್ನು ಹೊರಹಾಕುವ ಸಾಧ್ಯತೆ ಇರುವುದಾಗಿ ತಾವು ಭಾರತಕ್ಕೆ ಎಚ್ಚರಿಕೆ ನೀಡಿರುವುದಾಗಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೈ ತಿಳಿಸಿದ್ದಾರೆ.
ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಅಮೆರಿಕ ನಡೆಸಿರುವ ದೌರ್ಜನ್ಯಗಳ ಕುರಿತ ಲಕ್ಷಾಂತರ ಪುಟಗಳ ಮಾಹಿತಿಯನ್ನು ವಿಕಿಲೀಕ್ಸ್ ಹೊರಹಾಕುವ ಮೂಲಕ ಸಾಕಷ್ಟು ಟೀಕೆ, ಬೆದರಿಕೆ ಒಳಗಾಗಿದ್ದ. ಅಲ್ಲದೇ ಇದರಿಂದ ಅಮೆರಿಕ ಕೂಡ ಸಾಕಷ್ಟು ಮುಜುಗರಕ್ಕೆ ಒಳಗಾಗಿತ್ತು. ಆ ನಿಟ್ಟಿನಲ್ಲಿ ವಿಕಿಲೀಕ್ಸ್ ಇದೀಗ ಹೊರ ಹಾಕುವ ಮಾಹಿತಿಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶಗಳಿರಬಹುದು ಎಂಬ ಆತಂಕ ಅಮೆರಿಕದ್ದಾಗಿದೆ. ಇದರಿಂದಾಗಿ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆಯಾಗದಿರಲಿ ಎಂಬ ಮುನ್ಸೂಚನೆಯಾಗಿ ಅಮೆರಿಕ ಈ ಹೇಳಿಕೆ ಕೊಟ್ಟಿರುವ ಶಂಕೆಯೂ ವ್ಯಕ್ತವಾಗುತ್ತಿದೆ.
ಆದರೆ ವಿಕಿಲೀಕ್ಸ್ ಹೊರಹಾಕುತ್ತಿರುವ ಮಾಹಿತಿಯಲ್ಲಿ ಭಾರತಕ್ಕೆ ಸಂಬಂಧಿಸಿದ ವಿಷಯಗಳಿವೆಯೇ ಎಂಬುದರ ಬಗ್ಗೆ ತಮಗೆ ಖಚಿತವಾಗಿ ತಿಳಿದಿಲ್ಲ ಎಂದೂ ಕೂಡ ಕ್ರೌಲೈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಏನಾದರು ಕೂಡ ವಿಕಿಲೀಕ್ಸ್ ಮತ್ತಷ್ಟು ದಾಖಲೆ ಹೊರಹಾಕುವ ಬಗ್ಗೆ ತಮಗೆ ಮಾಹಿತಿ ಬಂದಿರುವುದಾಗಿ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಅಮೆರಿಕ ಈಗಾಗಲೇ ಜರ್ಮನಿ, ಸೌದಿ ಅರೇಬಿಯಾ, ಯುಎಇ, ಬ್ರಿಟನ್, ಫ್ರಾನ್ಸ್ ಹಾಗೂ ಅಫ್ಘಾನಿಸ್ತಾನ ಮುಖಂಡರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.