ಹಾಂಗ್‌ಕಾಂಗ್, ಮಂಗಳವಾರ, 30 ನವೆಂಬರ್ 2010( 19:43 IST )
ಅಪರೂಪದ ನಸುಗೆಂಪು ಬಣ್ಣದ ವಜ್ರ ಸುಮಾರು 23 ಮಿಲಿಯನ್‌ಗೂ ಅಧಿಕ ಮೊತ್ತಕ್ಕೆ ಹಾಂಗ್‌ಕಾಂಗ್‌ನಲ್ಲಿ ಹರಾಜು ಆಗುವ ಮೂಲಕ ಏಷ್ಯಾದಲ್ಲಿಯೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಭರಣ ಎಂದು ಹೇಳಲಾಗಿದೆ.
ಅತ್ಯಪರೂಪವಾದ 14.23 ಕ್ಯಾರಟ್ ಹೊಂದಿರುವ ಪಿಂಕ್ ಡೈಮಂಡ್ ಅನ್ನು 23,165,968 ಮಿಲಿಯನ್ ಡಾಲರ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಹರಾಜಿನಲ್ಲಿ ಪಡೆದಿರುವುದಾಗಿ ಹರಾಜು ಸಂಸ್ಥೆ ಕ್ರಿಸ್ಟೈಸ್ ತಿಳಿಸಿದೆ.
ಈ ನಸುಗೆಂಪು ಬಣ್ಣದ ವಜ್ರ ಖರೀದಿಸಲು ಸಾಕಷ್ಟು ಪೈಪೋಟಿ ಇದ್ದಿತ್ತು. ಐದು ಮಂದಿ ಬಿಡ್‌ನಲ್ಲಿ ಭಾಗವಹಿಸಿದ್ದರೂ ಕೂಡ ಅದರಲ್ಲಿ ಒಬ್ಬರು ಅತೀ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ್ದರಿಂದ ಪಿಂಕ್ ಡೈಮಂಡ್ ಅವರ ಪಾಲಾಗಿದೆ ಎಂದು ಹೇಳಿದೆ. ಆದರೆ ಈ ಡೈಮಂಡ್ 14ರಿಂದ 19 ಮಿಲಿಯನ್ ಡಾಲರ್ ಮೊತ್ತಕ್ಕೆ ಹರಾಜಾಗಲಿಗದೆ ಎಂದು ನಿರೀಕ್ಷಿಸಲಾಗಿತ್ತು. ಅಚ್ಚರಿ ಎಂಬಂತೆ ನಮ್ಮ ಊಹೆಗೂ ಮೀರಿ ಅಧಿಕ ಮೊತ್ತಕ್ಕೆ ವಜ್ರ ಹರಾಜಾಗಿದೆ ಎಂದು ಸಂಸ್ಥೆ ತಿಳಿಸಿದೆ.ಭಾರೀ ಮೊತ್ತಕ್ಕೆ ವಜ್ರ ಹರಾಜಾಗುವ ಮೂಲಕ ಈವರೆಗಿನ ವಿಶ್ವ ದಾಖಲೆಯನ್ನು ಮೀರಿಸಿದೆ.