ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರ ಸಾರ್ವಜನಿಕ ಸಮಾರಂಭದಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ವಿಫಲಗೊಳಿಸಿರುವ ಪಾಕ್ ಭದ್ರತಾ ಅಧಿಕಾರಿಗಳು, ಈ ಸಂಬಂಧ ಇಬ್ಬರನ್ನು ಸೆರೆ ಹಿಡಿಯಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಸಿಂಧ್ ಪ್ರಾಂತ್ಯದ ಸುಖುರ್ ಜಿಲ್ಲೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷದ 44ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭ ಏರ್ಪಡಿಸಲಾಗಿತ್ತು. ಸಭೆಗೆ ಪ್ರಧಾನಿ ಗಿಲಾನಿ ಮುಖ್ಯ ಅತಿಥಿಯಾಗಿದ್ದರು. ಆದರೆ ಕೆಲವು ನಿಷೇಧಿತ ಉಗ್ರಗಾಮಿ ಸಂಘಟನೆ ಬಾಂಬ್ ಸ್ಫೋಟಿಸುವ ಸಂಚು ನಡೆಸಿದ್ದವು ಎಂದು ದುನ್ಯಾ ಟಿವಿ ವರದಿ ಮಾಡಿದೆ.
ಈ ಸಂದರ್ಭದಲ್ಲಿ ಪೇಶಾವರದಿಂದ ಆಗಮಿಸಿದ್ದ ಟ್ರಕ್‌ವೊಂದನ್ನು ಪೊಲೀಸರು ತಪಾಸಣೆ ನಡೆಸಿದಾಗ, ಅದರಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ , 12 ಎಕೆ 47 ಹಾಗೂ ಮೂರು ಸಾವಿರ ಬುಲೆಟ್ಸ್ ಅನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಚಾನೆಲ್ ವಿವರಿಸಿದೆ. ಈ ಸಂಬಂಧ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.