ನನ್ನ ಹತ್ಯೆಯಾದ್ರೆ, ಸಹೋದರಿ ಅಧ್ಯಕ್ಷರಾಗಲಿ!; ಜರ್ದಾರಿ ಇಚ್ಛೆ
ಲಂಡನ್, ಬುಧವಾರ, 1 ಡಿಸೆಂಬರ್ 2010( 14:56 IST )
'ಒಂದು ವೇಳೆ ನನ್ನ ಹತ್ಯೆಯಾದರೆ, ತನ್ನ ಸಹೋದರಿ ಫಾರ್ಯಾಲ್ ತಾಲ್‌ಪುರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು' ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪಾಕ್‌ನಲ್ಲಿನ ಅಮೆರಿಕ ರಾಯಭಾರಿಗೆ ಮಾಹಿತಿ ನೀಡಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.
ವಿಕಿಲೀಕ್ಸ್ ನೂತನವಾಗಿ ಪ್ರಕಟಿಸಿರುವ ದಾಖಲೆಯನ್ನು ಉಲ್ಲೇಖಿಸಿ ಬ್ರಿಟನ್ ದೈನಿಕ ವರದಿ ಮಾಡಿದ್ದು, ಆ ನಿಟ್ಟಿನಲ್ಲಿ ಜರ್ದಾರಿ ತನ್ನ ಸಂಭಾವ್ಯ ಹತ್ಯೆಗೂ ಮುನ್ನ ವಿಸ್ತ್ರತ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದೆ.
ತನ್ನ ಕೊಲೆಯಾದಲ್ಲಿ, ತನ್ನ ಮಗನ ಸೂಚನೆಯಂತೆ ಸಹೋದರಿ ತಾಲ್‌ಪುರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕಳೆದ ವರ್ಷ ಜರ್ದಾರಿ ಅವರು ಅಮೆರಿಕದ ರಾಯಭಾರಿ ಅನ್ನೆ ಪ್ಯಾಟ್ಟರ್ಸನ್‌ಗೆ ತಿಳಿಸಿದ್ದಾರೆ ಎಂದು ವಿವರಿಸಿದೆ. ಅಷ್ಟೇ ಅಲ್ಲ ನನಗೆ ಈ ವಿಷಯ ಹೇಳಲೂ ಕಷ್ಟವಾಗುತ್ತದೆ, ನನ್ನನ್ನು ಕ್ಷಮಿಸಿ ನಾವು ತಾಲಿಬಾನ್ ವಿರುದ್ಧ ಗೆಲುವು ಸಾಧಿಸಲಾರೆವು ಎಂಬುದಾಗಿಯೂ ಮನಬಿಚ್ಚಿ ಹೇಳಿದ್ದಾರಂತೆ.
ನಾನು ಬೇನಜಿರ್ ಆಗಲು ಸಾಧ್ಯವಿಲ್ಲ, ಆ ವಿಷಯವನ್ನೂ ನಾನು ಚೆನ್ನಾಗಿ ಬಲ್ಲೆ ಎಂದು ಭುಟ್ಟೋ ಹತ್ಯೆ ನಂತರ ಜರ್ದಾರಿ ಪ್ಯಾಟ್ಟರ್ಸನ್ ಅವರಲ್ಲಿ ಅಲವತ್ತುಕೊಂಡಿರುವುದಾಗಿ ವಿಕಿಲೀಕ್ಸ್ ದಾಖಲೆ ಬಹಿರಂಗಪಡಿಸಿರುವುದಾಗಿ ವರದಿ ತಿಳಿಸಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಮಿಲಿಟರಿ ಆಡಳಿತ ಬರುವ ಹೆದರಿಕೆಯೂ ತೀವ್ರವಾಗಿ ಅವರನ್ನು ಕಾಡುತ್ತಿದೆಯಂತೆ.