ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ (ಆಸಿಯಾನ್) ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇರುವ ಭಾರತ ಒಂದು 'ಅವಿವೇಕಿ ದೇಶ' ಎಂದು ಸಿಂಗಾಪುರದ ರಾಜತಾಂತ್ರಿಕರು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿರುವ ಮಾಹಿತಿ ಇದೀಗ ವಿಕಿಲೀಕ್ಸ್‌ನಿಂದ ಬಟಾಬಯಲಾಗಿದೆ.
ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ಭಾರತ ಮಾತ್ರವಲ್ಲ, ಮಲೇಷ್ಯಾ,ಥಾಯ್ಲೆಂಡ್ ಮತ್ತು ಜಪಾನ್‌ಗಳ ಕುರಿತು ಇದೇ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ. 2008-09ರಲ್ಲಿ ಅಮೆರಿಕದ ಪೂರ್ವ ಏಷ್ಯಾ ಮೇಲಿನ ರಕ್ಷಣಾ ಉಪ ಕಾರ್ಯದರ್ಶಿ ಡೇವಿಡ್ ಸೆಡ್ನಿ ಅವರ ಜತೆ ಸಿಂಗಾಪುರದ ಅಧಿಕಾರಿಗಳು ನಡೆಸಿದ ಸಂಭಾಷಣೆಯ ತುಣುಕುಗಳು ವಿಕಿಲೀಕ್ಸ್ ಮೂಲಕ ಆಸ್ಟ್ರೇಲಿಯಾದ ಫೈರ್‌ಫ್ಯಾಕ್ಸ್ ಮಾಧ್ಯಮ ಗುಂಪಿಗೆ ದೊರಕಿದ್ದು, ಅದೀಗ ಪ್ರಕಟಗೊಂಡಿದೆ.
ಜಪಾನ್‌ನಲ್ಲಿ ನಾಯಕತ್ವದ ಕೊರತೆ ಇಧೆ, ಆಸಿಯಾನ್ ಜತೆಗೆ ಚೀನಾದ ಸಂಬಂಧ ಹೆಚ್ಚಿರುವುದರಿಂದ ಜಪಾನ್ ಕೊಬ್ಬು ಕರಗಿದೆ. ಭಾರತವೂ ಇಲ್ಲಿ ಅರ್ಧ ಒಳಗೆ, ಅರ್ಧ ಹೊರಗೆ ಎಂಬಂತೆ ಇದ್ದು, ಅದೊಂದು ಸ್ಟುಪಿಡ್ ದೇಶ ಎಂದು ಸಿಂಗಾಪುರದ ರಾಯಭಾರಿ ಟೊಮ್ಮಿ ಕೋ ಅವರು ಅಮೆರಿಕಕ್ಕೆ ತಿಳಿಸಿದ್ದರು.