ಇಸ್ಲಾಮ್ ಪಾಕಿಸ್ತಾನದ ಏಕೈಕ ಗುರುತಾಗಿದೆ. ಹಾಗಾಗಿ ಇಲ್ಲಿನ ನೆಲದಲ್ಲಿ ಜಾತ್ಯತೀತಕ್ಕೆ ಯಾವುದೇ ಅವಕಾಶ ಇಲ್ಲ. ಯಾಕೆಂದರೆ ಇಸ್ಲಾಮ್ ಅನ್ನು ನಂಬಿಕೊಂಡ ಜನರೇ ಇಲ್ಲಿರುವುದಾಗಿ ಜಮಾತ್ ಇ ಇಸ್ಲಾಮಿ ಸಹಾಯಕ ಕಾರ್ಯದರ್ಶಿ ಹಫೀಜ್ ಸಾಜಿದ್ ಅನ್ವರ್ ತಿಳಿಸಿದ್ದಾರೆ.
ಇಲ್ಲಿನ ಮನ್ಸೂರಾ ಮಸೀದಿಯಲ್ಲಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಪವಿತ್ರ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸುವ ಧಾರ್ಮಿಕ ನಿಂದನೆಯನ್ನು ಯಾವುದೇ ಮುಸ್ಲಿಮ್ ಸಹಿಸುವುದಿಲ್ಲ ಎಂದು ಹೇಳಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಯಾರೇ ಅವಮಾನಿಸಲಿ ಅವರಿಗೆ ಹತ್ಯೆಯೇ ಸೂಕ್ತವಾದ ಶಿಕ್ಷೆ ಎಂದಿರುವ ಅನ್ವರ್, ಹಾಗಾಗಿ ಪ್ರವಾದಿಯನ್ನು ಅವಹೇಳನ ಮಾಡಿದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಸಹಾನುಭೂತಿ ತೋರಿದ್ದಲ್ಲದೇ, ಆಕೆಗೆ ಕ್ಷಮಾದಾನ ನೀಡುವ ಬಗ್ಗೆಯೂ ಭರವಸೆ ಕೊಟ್ಟಿದ್ದರು. ಅದೇ ಅವರ ಕೊರಳಿಗೆ ಉರುಳಾಯಿತು ಎಂದರು.
ಅಷ್ಟೇ ಅಲ್ಲ ಧಾರ್ಮಿಕ ನಿಂದನಾ ಕಾಯ್ದೆಯನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸುತ್ತಿರುವ ಪಾಕಿಸ್ತಾನದ ಆಡಳಿತಗಾರರು ಪಂಜಾಬ್ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರ ಹತ್ಯೆಯಿಂದ ಪಾಠ ಕಲಿತುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಇತ್ತೀಚೆಗಷ್ಟೇ ಅವರ ಅಂಗರಕ್ಷಕನಾಗಿದ್ದ ಮಲಿಕ್ ಮುಮ್ತಾಜ್ ಹುಸೈನ್ ಗುಂಡಿಟ್ಟು ಹತ್ಯೆಗೈದಿದ್ದ. ಗವರ್ನರ್ ಸಲ್ಮಾನ್ ಅವರು ಧಾರ್ಮಿಕ ನಿಂದನಾ ಕಾಯ್ದೆಯ ವಿರೋಧವಾಗಿ ಮಾತನಾಡಿದ್ದೇ ಅವರ ಹತ್ಯೆಗೆ ಕಾರಣ ಎಂದು ಮಲಿಕ್ ಬಂಧನದ ನಂತರ ಪೊಲೀಸರಿಗೆ ತಿಳಿಸಿದ್ದ.