ಪಾಕಿಸ್ತಾನದ ದಕ್ಷಿಣ ನಗರವಾದ ಕರಾಚಿಯಲ್ಲಿ ಖಾಸಗಿ ಟಿವಿ ಚಾನೆಲ್ ಪತ್ರಕರ್ತರೊಬ್ಬರನ್ನು ಅಪರಿಚಿತ ಗುಂಪೊಂದು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ವಿವಿಧ ಪ್ರಕರಣಗಳಲ್ಲಿ ಸುಮಾರು ಏಳು ಮಂದಿಯನ್ನು ಹತ್ಯೆಗೈದಿರುವ ಪ್ರಕರಣವೂ ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಜಿಯೋ ನ್ಯೂಸ್ ಚಾನೆಲ್ ಪತ್ರಕರ್ತ ವಾಲಿ ಖಾನ್ ಬಾಬರ್ (29) ಗುರುವಾರ ಸಂಜೆ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಲಿಯಾಖತಾಬಾದ್ ಡಾಖಾನಾ ಬಸ್ ನಿಲ್ದಾಣದ ಸಮೀಪ ದಾಳಿ ನಡೆಸಿ ಹತ್ಯೆಗೈದಿದ್ದರು.
ಪ್ರಾಥಮಿಕ ತನಿಖಾ ಮಾಹಿತಿ ಪ್ರಕಾರ, ಟ್ರಾಫಿಕ್ ಜಾಮ್ನಿಂದ ವಾಹನಗಳ ಸಂಚಾರ ನಿಂತ ಸಂದರ್ಭದಲ್ಲಿ ಕಾರಿನಲ್ಲಿದ್ದ ಆಗಂತುಕರಲ್ಲೊಬ್ಬ ಸಮೀಪದಿಂದಲೇ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಬಾಬರ್ನ ತಲೆ, ಮುಖ ಮತ್ತು ಕುತ್ತಿಗೆ ಭಾಗಕ್ಕೆ ತಗುಲಿರುವುದಾಗಿ ವಿವರಿಸಿದ್ದಾರೆ.
ಇದೊಂದು ವ್ಯವಸ್ಥಿತ ಸಂಚಿನ ಕೊಲೆ ಎಂಬುದಾಗಿ ಪೊಲೀಸ್ ಅಧಿಕಾರಿ ಸುಲ್ತಾನ್ ಖ್ವಾಜಾ ಹೇಳಿದ್ದಾರೆ. ಅಷ್ಟೇ ಅಲ್ಲ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ.