ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11-ಸಾಕ್ಷಿಯ ವಿಚಾರಣೆಗೆ ಅವಕಾಶ ಕೊಡಿ; ಭಾರತಕ್ಕೆ ಪಾಕ್ (Pakistan | Mumbai terror attack | witnesses | India | Chidambaram)
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ಕೊಡಬೇಕೆಂದು ಮತ್ತೊಮ್ಮೆ ಭಾರತಕ್ಕೆ ಮನವಿ ಸಲ್ಲಿಸಲು ಪಾಕಿಸ್ತಾನ ಮುಂದಾಗಿದ್ದು, ಈ ಬಗ್ಗೆ ಶೀಘ್ರವೇ ಭಾರತಕ್ಕೆ ಮನವಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಕ್ಷಿಗಳ ವಿಚಾರಣೆಗೆ ಅನುಮತಿ ನೀಡಬೇಕೆಂದು ಕೋರಿ ಪಾಕಿಸ್ತಾನ ಎರಡನೇ ಬಾರಿಗೆ ಮನವಿ ಸಲ್ಲಿಸುತ್ತಿರುವುದಾಗಿ ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಶುಕ್ರವಾರ ವರದಿ ಮಾಡಿದೆ.

ದಾಳಿ ಕುರಿತಂತೆ ಮ್ಯಾಜಿಸ್ಟ್ರೇಟ್ ಮತ್ತು ತನಿಖಾ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್‌ಬಿಐ)ಯ ವಿಶೇಷ ತಂಡಕ್ಕೆ ಭಾರತಕ್ಕೆ ಆಗಮಿಸಲು ಅನುಮತಿ ನೀಡಬೇಕೆಂದು ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ಭಾರತದ ಗೃಹ ಸಚಿವ ಪಿ.ಚಿದಂಬರಂ ಅವರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಮನವಿ ಮಾಡಿಕೊಂಡಿದ್ದರು.

2008 ನವೆಂಬರ್ 26ರಂದು ಪಾಕಿಸ್ತಾನದಿಂದ ಆಗಮಿಸಿದ್ದ ಹತ್ತು ಮಂದಿ ಉಗ್ರರು ಮುಂಬೈನಲ್ಲಿ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಸುಮಾರು 166 ಮಂದಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಒಂಬತ್ತು ಮಂದಿ ಉಗ್ರರು ಭದ್ರತಾ ಪಡೆಯ ಪ್ರತಿದಾಳಿಗೆ ಬಲಿಯಾಗಿದ್ದರು. ಅಜ್ಮಲ್ ಅಮಿರ್ ಕಸಬ್ ಸೆರೆಸಿಕ್ಕ ಏಕೈಕ ಉಗ್ರನಾಗಿದ್ದು, ಆತ ಮುಂಬೈ ಜೈಲಿನಲ್ಲಿದ್ದಾನೆ.