ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವಸಂಸ್ಥೆ ಬಳಿಕ ಅಮೆರಿಕದಿಂದಲೂ ಮೋದಿ ಆಳ್ವಿಕೆಗೆ ಹ್ಯಾಟ್ಸಾಫ್! (Gujarat Chief Minister | Narendra Modi | Congressional Research Service | Latest News in Kannada)
ಗುಜರಾತ್‌ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಜಾಮೀನು ನಿರಾಕರಿಸಿದ್ದ ಅಮೆರಿಕ ಈಗ ಪಶ್ಚಾತ್ತಾಪವೋ ಎಂಬಂತೆ ತನ್ನ ನಿಲುವು ಬದಲಿಸಿದೆ. "ಗುಜರಾತ್‌ ಸರಕಾರವು ಪರಿಣಾಮಕಾರಿ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿರುವ ಅಮೆರಿಕ ಕಾಂಗ್ರೆಸ್‌, ದೇಶದ ಆರ್ಥಿಕ ಪ್ರಗತಿಗೆ ಗುಜರಾತ್ ಸರಕಾರ ಮಹತ್ತರವಾದ ಕೊಡುಗೆ ನೀಡಿದೆ ಎಂದು ಹೇಳಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೂ ಸಹ ಗುಜರಾತ್‌ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ಭಾರತದ ಬಗ್ಗೆ ವರದಿ ನೀಡಿರುವ ಕಾಂಗ್ರೆಸ್‌ ಸಂಶೋಧನಾ ವರದಿ (ಸಿಆರ್‌ಎಸ್‌)ನಲ್ಲಿ ತಿಳಿಸಲಾಗಿದೆ.

ವಿವಾದಾತ್ಮಕ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತಮ ಆಡಳಿತ ನೀಡಿದ್ದಲ್ಲದೇ, ಅಧಿಕಾರಶಾಹಿಗೆ ತಡೆ ಹಾಕಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ಮೂಲಕ ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸಿಆರ್‌ಎಸ್‌ ವರದಿಯಲ್ಲಿ ತಿಳಿಸಲಾಗಿದೆ.

ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ವಿಭಾಗವಾಗಿರುವ ಸಿಆರ್‌ಎಸ್‌, ಅಮೆರಿಕದ ಜನ ಪ್ರತಿನಿಧಿಗಳ ಹಿತದೃಷ್ಟಿಯಿಂದ ಕೆಲವು ವಿಷಯಗಳ ಕುರಿತು ಕಾಲಕಾಲಕ್ಕೆ ಸಂಶೋಧನೆ ನಡೆಸಿ ವರದಿಗಳನ್ನು ನೀಡುತ್ತದೆ.

ಅಮೆರಿಕದ ಜನ ಪ್ರತಿನಿಧಿಗಳಿಗಾಗಿ ಸಿಆರ್‌ಎಸ್‌ ಸಿದ್ಧಪಡಿಸಿರುವ 94 ಪುಟಗಳ ವರದಿಯನ್ನು, ಅಮೆರಿಕ ವಿಜ್ಞಾನಿಗಳ ಒಕ್ಕೂಟವು ಬಹಿರಂಗಪಡಿಸಿದೆ.

2002 ರಲ್ಲಿ ನಡೆದ ಮತೀಯ ಹಿಂಸಾಚಾರದ ಆಪಾದನೆಯ ನಡುವೆಯೂ ರಾಜ್ಯದಲ್ಲಿ ಆಧುನಿಕ ರಸ್ತೆ ಹಾಗೂ ವಿದ್ಯುತ್‌ ಮೊದಲಾ‌ದ ಮೂಲ ಸೌಕರ್ಯಗಳ ಮೇಲೆ ಹೆಚ್ಚಿನ ಹಣ ಹೂಡುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಶೇ.11ಕ್ಕಿಂತಲೂ ಹೆಚ್ಚಿನ ವಾರ್ಷಿಕ ಪ್ರಗತಿ ದರವನ್ನು ಸಾಧಿಸಿದ್ದಾರೆ ಎಂದು ಸಿಆರ್‌ಎಸ್‌ ವರದಿ ತಿಳಿಸಿದೆ.

ಗುಜರಾತ್‌ನಲ್ಲಿ ಅಗತ್ಯ ಮೂಲ ಸೌಕರ್ಯಗಳಿಂದಾಗಿ ವಿದೇಶಿ ಬಂಡವಾಳವೂ ಹರಿದು ಬರುತ್ತಿದ್ದು, ಜನರಲ್‌ ಮೋಟಾರ್ಸ್‌, ಮಿತ್ಸುಬಿಷಿ ಮೊದಲಾ‌ದ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿವೆ. ದೇಶದ ಜನ ಸಂಖ್ಯೆಯ ಶೇ.5ರಷ್ಟಿರುವ ಗುಜರಾತ್‌ ರಾಜ್ಯವು ದೇಶದ ರಫ್ತು ವಹಿವಾಟಿಗೆ ಐದನೇ ಒಂದು ಭಾಗವನ್ನು ಕೊಡುಗೆಯಾಗಿ ನೀಡಿದೆ ಎಂದು ಸಿಆರ್‌ಎಸ್‌ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ನಿತೀಶ್ ಕುಮಾರ್‌ಗೆ 2ನೇ ಸ್ಥಾನ
ಗುಜರಾತ್‌ ನಂತರ ಬಿಹಾರವು ಉತ್ತಮ ಆಡಳಿತ ನೀಡುವ ಮೂಲಕ ಮಾದರಿ ರಾಜ್ಯವಾಗಿದೆ ಎಂದು ಸಿಆರ್‌ಎಸ್‌ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಭಾರತದ ಅತಿ ಬಡ ರಾಜ್ಯವಾಗಿರುವ ಬಿಹಾರದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಜಾತಿ ಆಧಾರಿತ ರಾಜಕಾರಣವನ್ನು ಮಟ್ಟ ಹಾಕಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವುದರೊಂದಿಗೆ ಶಿಕ್ಷಣ ಮತ್ತು ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಜನಸಾಮಾನ್ಯರಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಸಿಆರ್‌ಎಸ್‌ ವರದಿಯಲ್ಲಿ ಹೇಳಲಾಗಿದೆ.
ನರೇಂದ್ರ ಮೋದಿ ಹಾಗೂ ನಿತೀಶ್‌ ಕುಮಾರ್‌ ಅವರ ಅಭಿವೃದ್ಧಿ ಕಾರ್ಯವು ದೇಶದ ಅತ್ಯಂತ ಹೆಸರುವಾಸಿಯಾದ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಗೂ ಪ್ರೇರಣೆಯಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ರಸ್ತೆ ಮೊದಲಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಿರುವುದಲ್ಲದೇ ರಾಜ್ಯದ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಆರ್‌ಎಸ್‌ ವರದಿಯಲ್ಲಿ ತಿಳಿಸಲಾಗಿದೆ.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದನ್ನೂ ಸಿಆರ್‌ಎಸ್‌ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಭಾರತದ ಅತ್ಯಂತ ಬಡ ರಾಜ್ಯಗಳ ಪೈಕಿ ಒಂದಾಗಿರುವ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸವಾಲು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ, ಸಿಆರ್ಎಸ್, ಅಮೆರಿಕ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ