ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನವನ್ನು ಹೆಚ್ಚೂ-ಕಡಿಮೆ ಮೂರು ಪಟ್ಟು ಏರಿಸುವ ಯುಪಿಎ ಪ್ರಸ್ತಾಪಕ್ಕೆ ರಾಜ್ಯಸಭೆಯು ಧ್ವನಿಮತದ ಅಂಗೀಕಾರ ನೀಡುವುದರೊಂದಿಗೆ ಸಂಸತ್ತಿನ ಅನುಮೋದನೆ ದೊರೆಯಿತು.
ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರ ಪಡೆದಿರುವ ಈ ಮಸೂದೆಯ ಪ್ರಕಾರ, ರಾಷ್ಟ್ರಪತಿಯವರ ಮೂಲ ವೇತನವನ್ನು ಮಾಸಿಕ 50 ಸಾವಿರ ರೂ.ಗಳಿಂದ 1.50 ಲಕ್ಷಕ್ಕೆ, ಉಪರಾಷ್ಟ್ರಪತಿ ಸಂಬಳವನ್ನು 40 ಸಾವಿರ ರೂ.ಗಳಿಂದ 1.25 ಲಕ್ಷ ರೂ.ಗೆ ಮತ್ತು ರಾಜ್ಯಪಾಲರುಗಳ ವೇತನವನ್ನು 36 ಸಾವಿರ ರೂಪಾಯಿಯಿಂದ 1.10 ಲಕ್ಷ ರೂ.ಗೆ ಏರಿಸಲಾಗುತ್ತದೆ.
ವೇತನ ಮತ್ತು ನಿವೃತ್ತಿ ವೇತನ ಪರಿಷ್ಕರಣೆಯು 2006ರ ಜನವರಿ 1ರಿಂದಲೇ ಜಾರಿಗೆ ಬರುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿಯವರು ತಮ್ಮ ವೇತನದ ಶೇ.50 ಭಾಗವನ್ನು ನಿವೃತ್ತಿ ವೇತನವನ್ನಾಗಿಯೂ ಪಡೆಯಲಿದ್ದಾರೆ.
ಇದರ ಜತೆಗೆ, ಮಾಜಿ ರಾಷ್ಟ್ರಪತಿಗಳಿಗೆ ಒಂದು ಮೊಬೈಲ್ ಫೋನ್, ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕ, ಮತ್ತು ಹೆಚ್ಚುವರಿ ಆಪ್ತ ಕಾರ್ಯದರ್ಶಿ ಹಾಗೂ ಒಬ್ಬ ಜವಾನನನ್ನು ಒದಗಿಸಲಾಗುತ್ತದೆ. ಕಚೇರಿ ನಿರ್ವಹಣಾ ಶುಲ್ಕವನ್ನು ವರ್ಷಕ್ಕೆ 12 ಸಾವಿರ ರೂ.ಗಳಿಂದ 60 ಸಾವಿರ ರೂಪಾಯಿಗಳಿಗೆ ಏರಿಸಲಾಗುತ್ತದೆ.
ಅಗಲಿದ ರಾಷ್ಟ್ರಪತಿಗಳ ಸಂಗಾತಿಗಳೂ ಪೀಠೋಪಕರಣ ಸಹಿತದ ನಿವಾಸ, ಕಚೇರಿ ಸಿಬ್ಬಂದಿ, ಕಾರು, ಟೆಲಿಫೋನ್ ಮತ್ತು ಪ್ರಯಾಣ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ಮಾಜಿ ಉಪರಾಷ್ಟ್ರಪತಿಗಳಿಗೆ ಸಂಬಂಧಿಸಿ, ಹೆಚ್ಚುವರಿ ಸಿಬ್ಬಂದಿ ಜೊತೆಗೆ, ಕಚೇರಿ ನಿರ್ವಹಣಾ ಶುಲ್ಕವನ್ನು 12 ಸಾವಿರ ರೂ.ಗಳಿಂದ 60 ಸಾವಿರಕ್ಕೆ ಏರಿಸಲಾಗುತ್ತದೆ. ಅಗಲಿದ ಉಪರಾಷ್ಟ್ರಪತಿಗಳು ಕೂಡ ಪೀಠೋಪಕರಣ-ಸಹಿತವಾದ ವಸತಿಗೆ ಅರ್ಹರಾಗುತ್ತಾರೆ.
ಮೇಲ್ಮನೆಯು ಈ ಪ್ರಸ್ತಾವನೆಗಳನ್ನು ಪಕ್ಷಭೇದವಿಲ್ಲದೆ ಧ್ವನಿಮತದಿಂದ ಅಂಗೀಕರಿಸಿತಾದರೂ, ಕೆಲವು ಸದಸ್ಯರು ನಿವೃತ್ತಿಯ ಬಳಿಕ ರಾಷ್ಟ್ರಪತಿ-ಉಪರಾಷ್ಟ್ರಪತಿ ಮತ್ತವರ ಸಂಗಾತಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಬೇಕೆಂಬ ಒತ್ತಾಯ ಕೇಳಿಬಂತು. ಮೇಲ್ಮನೆಯ ದೈನಂದಿನ ಕಲಾಪಗಳನ್ನು ನಡೆಸಲು ಶ್ರಮ ಪಡುತ್ತಿರುವ ರಾಜ್ಯಸಭಾ ಕಚೇರಿ ಸಿಬ್ಬಂದಿಗೂ ಇದೇ ಮಾದರಿಯಲ್ಲಿ ವೇತನ ಹೆಚ್ಚಿಸಬೇಕು ಎಂದು ಎಡಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
ನಮಗೂ ಸಂಬಳ ಹೆಚ್ಚಿಸಿ: ಸಂಸದರ ಆಗ್ರಹ ಇದೇ ವೇಳೆ, ಆರ್ಥಿಕ ಒತ್ತಡದ ಬಗ್ಗೆ ದೂರೆತ್ತಿದ ಸಂಸತ್ಸದಸ್ಯರು, ತಮ್ಮ ಕೆಲಸಕ್ಕೆ ತಕ್ಕಂತೆ ವೇತನವನ್ನೂ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ತಮ್ಮ ಹಣಕಾಸು ಸ್ಥಿತಿಗತಿ ಬಗ್ಗೆ ಕೆಟ್ಟ ಭಾವನೆ ಮೂಡಿಸಲಾಗಿದೆ. ಹೆಚ್ಚಿನವರು ತಮ್ಮ ತಮ್ಮ ಕ್ಷೇತ್ರದ ಆವಶ್ಯಕತೆಗಳಿಗಾಗಿ ಹಣಕಾಸು ಹೊಂದಿಸಲು ಹೆಣಗಾಡುತ್ತಿದ್ದಾರೆ ಎಂದವರು ಹೇಳಿದರು.
ಬಿಜೆಪಿ ಸದಸ್ಯ ಎಸ್.ಎಸ್.ಅಹ್ಲುವಾಲಿಯಾ ಈ ಕುರಿತು ಚರ್ಚೆ ಆರಂಭಿಸಿ, ಸಂಸದನೊಬ್ಬ 16 ಸಾವಿರ ರೂ. ವೇತನ ಪಡೆಯುತ್ತಾನೆ. ಆದರೆ ಕಂಪ್ಯೂಟರ್-ಸಾಕ್ಷರನಾಗಿರುವ ಕಾರ್ಯದರ್ಶಿಯೊಬ್ಬನ ನೇಮಕಕ್ಕೆ ನೀಡಲಾಗುತ್ತಿರುವ 14 ಸಾವಿರ ರೂ. ಏನೇನೂ ಸಾಲುತ್ತಿಲ್ಲ ಎಂದರು. ಕೆಲವು ರಾಜ್ಯಗಳಲ್ಲಿ, ಶಾಸಕರೂ ಸಂಸದರಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ ಎಂದವರು ನುಡಿದರು.
ಕಾಂಗ್ರೆಸ್ ಸದಸ್ಯ ಸುದರ್ಶನ್ ನಾಚಿಯಪ್ಪನ್ ಅವರೂ ಇದಕ್ಕೆ ದನಿಗೂಡಿಸಿದರು. ಈ ಚರ್ಚೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ, ಸಂಸದರ ಅಭಿಪ್ರಾಯಗಳನ್ನು ಸಂಬಂಧಪಟ್ಟ ಸಂಸದೀಯ ಸಮಿತಿಗೆ ತಿಳಿಸುವುದಾಗಿ ಭರವಸೆ ನೀಡಿದರು. |