ಮುಂಬೈ ದಾಳಿಯ ನಂತರ ಪಾಕ್ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಉಲ್ಭಣಗೊಳ್ಳುತ್ತಿದ್ದು, ಪಾಕಿಸ್ತಾನದ ಯಾವುದೇ ಯುದ್ಧಭೀತಿ ಪರಿಸ್ಥಿತಿಯನ್ನು ನಾವು ಎದುರಿಸಲು ಸಿದ್ದರಿದ್ದೇವೆ ಎಂದು ಸೇನಾ ಮುಖ್ಯಸ್ಥ ದೀಪಕ್ ಕಪೂರ್ ತಿಳಿಸಿದ್ದಾರೆ.
26/11ರ ಭಯೋತ್ಪಾದನಾ ದಾಳಿಯ ಬಳಿಕ ಪಾಕ್ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾವು ಎಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದ್ದು, ಪಾಕ್‌ನ ಯಾವುದೇ ಪ್ರಚೋದನಾತ್ಮಕ ಪ್ರತಿಕ್ರಿಯೆ ಎದುರಿಸಲು ಸೇನೆ ಸದಾ ಸನ್ನದ್ದವಾಗಿದೆ ಎಂದಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಷ್ಕರ್ ಇ ಮೊಹಮ್ಮದ್ ವರಿಷ್ಠ ಮಸೂದ್‌ನನ್ನು ಉಗ್ರರ ಪಟ್ಟಿಗೆ ಸೇರಿಸುವಂತೆ ಭಾರತ ಈಗಾಗಲೇ ವಿಶ್ವಸಂಸ್ಥೆ ರಕ್ಷಣಾ ಮಂಡಳಿಗೆ ಮನವಿ ಸಲ್ಲಿಸಿರುವುದಾಗಿ ಕಪೂರ್ ಹೇಳಿದರು.
ಅಲ್ಲದೇ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಕುರಿತು ಭಾರತ ಈಗಾಗಲೇ ಪುರಾವೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು. ಆದರೆ ಇದೀಗ ಪಾಕ್ ತನ್ನ ರಾಗ ಬದಲಿಸಿದ್ದು, ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿರುವುದು ಮಾಹಿತಿಯೇ ವಿನಃ ಸಾಕ್ಷ್ಯ ಅಲ್ಲ ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಿಳಿಸಿದ್ದರು.
|