ನವದೆಹಲಿ: ಅಮಾಯಕರನ್ನು ಕೊಲ್ಲುವವರು ಪ್ರಾಣಿಗಳು ಎಂಬದಾಗಿ ಹೇಳಿರುವ ಸುಪ್ರೀಂಕೋರ್ಟಿನ ಹಿರಿಯ ನ್ಯಾಯಾಧೀಶ ನ್ಯಾಯಮೂರ್ತಿ ಅರಿಜಿತ್ ಪಸಾಯತ್, ಉಗ್ರರ ಪರವಾದ ಮಾನವಹಕ್ಕುಗಳ ಪರವಾಗಿ ವಾದಿಸುವವರನ್ನು ಬಲವಾಗಿ ವಿರೋಧಿಸಿದ್ದಾರೆ. ಅಲ್ಲದೆ ಇಂತವರು ಮಾನವಹಕ್ಕುಗಳನ್ನು ಪಡೆಯಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.
ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಅಮಾಯಕರನ್ನು ಕೊಲ್ಲುವವರು ಮಾನವರಲ್ಲ ಎನ್ನುತ್ತಾ, ಮಾನವ ಹಕ್ಕುಗಳ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡ ಅವರು ಉಗ್ರರ ಪ್ರಕರಣಗಳಲ್ಲಿ ಪ್ರಾಣಿಗಳ ಹಕ್ಕು ಮಾತ್ರ ಉದ್ಭವಿಸುತ್ತದೆ ಎಂದು ಹೇಳಿದ್ದಾರೆ. ಅವರು ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದರು.
ಇದೇ ವೇಳೆ ಸಾಲಿಸಿಟರ್ ಜನರಲ್ ಗೂಲಮ್ ವಾಹನ್ವತಿ ಅವರೂ ಸಹ ಪಸಾಯತ್ ಅವರ ಅಭಿಪ್ರಾಯಕ್ಕೆ ಧ್ವನಿಗೂಡಿಸಿದರು. ಮುಂಬೈ ದಾಳಿಯ ಬಂಧಿತ ವಕೀಲನ ಪರವಾಗಿ ವಾದಿಸುವಂತೆ ಕೇಳಿದರೆ ತಾನಿದಕ್ಕೆ ಇಲ್ಲವೆನ್ನುವೆ ಎಂದೂ ಅವರು ನುಡಿದರು.
ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಬಂಧಿತ ಉಗ್ರ ಕಸಬ್‌ನಿಗೆ ತನ್ನನ್ನು ಪ್ರತಿನಿಧಿಸು ವಕೀಲರೊಬ್ಬರು ದೊರೆಯಬೇಕು. ಹಾಗಾದಾಗ ಮಾತ್ರ ನ್ಯಾಯೋಚಿತ ವಿಚಾರಣೆ ಸಾಧ್ಯ ಎಂದು ಇತ್ತೀಚೆಗೆ ಹೇಳಿದ್ದರು. ನಾವು ಕಠಿಣ ಕಾನೂನುಗಳನ್ನು ಹೊಂದಿರಬೇಕು. ಆದರೆ ಇದು ಆರೋಪಿತನಿಗೆ ಮಾನವೀಯ ಮೌಲ್ಯಗಳನ್ನು ಒದಗಿಸಬೇಕು ಎಂದು ಬಾಲಕೃಷ್ಣನ್ ಹೇಳಿದ್ದರು.
ಇತ್ತೀಚೆಗಿನ ಸಂಸತ್ ಅಧಿವೇಶನದಲ್ಲಿ ಜಾರಿಗೆ ತಂದಿರುವ ಹೊಸ ಕಾನೂನನ್ನು ವಿರೋಧಿಸಿದ್ದ ಆಮ್ನೆಸ್ಟಿ ಇಂಟರ್‌ನ್ಯಾಶನಲ್, ಇದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಹೊಸ ಕಾನೂನು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. |