ನವದೆಹಲಿ: ವೈವಾಹಿಕ ಜೀವನದಲ್ಲಿ 'ಸರಿಪಡಿಸಲಾಗದ ಒಡಕು' ಆಧಾರದಲ್ಲಿ ಹಿಂದೂ ದಂಪತಿಗಳಿಗೆ ವಿಚ್ಛೇದನ ನೀಡಲಾಗದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳು ದಂಪತಿಗಳ ನಡುವಿನ ಸಂಬಂಧ ಸರಿಪಡಿಸಲಾಗದಂತೆ ಒಡಕು ಮೂಡಿದ್ದರೆ, ಆ ಆಧಾರದಲ್ಲಿ ವಿಚ್ಛೇದನ ನೀಡಿದ್ದವು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ರ ವ್ಯಾಖ್ಯಾನ ಮಾಡಿದ ನ್ಯಾಯಮೂರ್ತಿಗಳಾದ ಮಾರ್ಖಾಂಡೇಯ ಕಟ್ಜು ಮತ್ತು ವಿ.ಎಸ್. ಸಿರ್ಪುರ್ಕಾರ್ ಅವರುಗಳನ್ನೊಳಗೊಂಡ ನ್ಯಾಯ ಪೀಠವು ವಿಚ್ಛೇದನ ಪಡೆಯಲು ಕ್ರೂರತೆ, ವ್ಯಭಿಚಾರ, ಪರಿತ್ಯಾಗ ಇತ್ಯಾದಿಗಳು ಸೇರಿದಂತೆ ಹಲವು ಆಧಾರಗಳಿವೆಯಾದರೂ, ಸರಿಪಡಿಸಲಾದ ಒಡಕು ವಿಚ್ಛೇದನಕ್ಕೆ ಕಾರಣವಲ್ಲ ಎಂದು ಹೇಳಿದೆ.
ವಿಷ್ಣು ಶರ್ಮಾ ಎಂಬಾತ ತನ್ನ ಪತ್ನಿ ಮಂಜು ಶರ್ಮಾರಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದಂಪತಿಗಳ ನಡುವಿನ ಒಡಕಿನ ಕಾರಣಕ್ಕೆ ಪತಿ ವಿಚ್ಛೇದನ ಬಯಸಿದ್ದರೂ ಪತ್ನಿ ವಿಚ್ಛೇದನ ನೀಡುವ ಇಚ್ಚೆ ಹೊಂದಿರಲಿಲ್ಲ. ಕುಟುಂಬ ನ್ಯಾಯಾಲಯ ಮತ್ತು ಹೈ ಕೋರ್ಟ್ ತನ್ನ ಅರ್ಜಿಯನ್ನು ವಜಾ ಮಾಡಿದ ಬಳಿಕ ವಿಷ್ಣು ಶರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. |