ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ಆತ್ಮ ವಿಶ್ವಾಸದಲ್ಲಿರುವ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯಪಾಲ ಎಂ.ಸಿ. ಭಂಡಾರೆ ಅವರನ್ನು ಭೇಟಿಯಾಗಿದ್ದು, ತನಗೆ 74ಕ್ಕೂ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಬಿಜೆಪಿ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿರುವ ಕಾರಣ ಒರಿಸ್ಸಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.
ಬಿಜು ಜನತಾದಳದ 61 ಸದಸ್ಯರಲ್ಲಿ, ಸ್ಪೀಕರ್ ಕಿಶೋರ್ ಮೊಹಂತಿ ಹಾಗೂ ಮಾಜಿ ಸಚಿವ ದೇವಶಿಸ್ ನಾಯ್ಕ್ ಹೊರತು ಪಡಿಸಿದರೆ ಮಿಕ್ಕೆಲ್ಲ ಶಾಸಕರು ಪಟ್ನಾಯಿಕ್ ಅವರೊಂದಿಗೆ ರಾಜಭವನಕ್ಕೆ ತೆರಳಿದ್ದರು.
ಸಿಪಿಐ-ಎಂ, ಸಿಪಿಐ ಹಾಗೂ ಎನ್‌ಸಿಪಿಯ ತಲಾ ಇಬ್ಬರು ಶಾಸಕರು, ಜೆಎಂಎಂನ ನಾಲ್ವರು ಹಾಗೂ ಏಳು ಸ್ವತಂತ್ರ ಶಾಸಕರು ಮತ್ತು ಓರ್ವ ಮಾಜಿ ಬಿಜೆಪಿ ಶಾಸಕರೂ ಪಟ್ನಾಯಿಕ್ ಅವರೊಂದಿಗೆ ರಾಜಭವನಕ್ಕೆ ತೆರಳಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು 30 ಶಾಸಕ ಬಲ ಹೊಂದಿದ್ದರೆ, ಕಾಂಗ್ರೆಸ್ 38 ಸದಸ್ಯ ಬಲವನ್ನು ಹೊಂದಿದೆ.
ಬಿಜೆಡಿ ಮತ್ತು ಬಿಜೆಪಿಯ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು ರಾಜಕೀಯ ಅಸ್ಥಿರತೆ ತಲೆದೋರಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. |