ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಡ್ಡಧಾರಣೆಗೆ ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡ್ಡಧಾರಣೆಗೆ ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಸು.ಕೋ
ತಾನು ಕಲಿಯುತ್ತಿರುವ ಕಾನ್ವೆಂಟ್ ಸ್ಕೂಲಿನಲ್ಲಿ ಗಡ್ಡಧಾರಣೆಗೆ ಅವಕಾಶ ನೀಡಬೇಕು ಎಂಬುದಾಗಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್, ಜಾತ್ಯತೀತತೆಯನ್ನು ಅತಿಯಾಗಿ ಜಗ್ಗಲು ಸಾಧ್ಯವಿಲ್ಲ ಹಾಗೂ ರಾಷ್ಟ್ರದ ತಾಲೀಬಾನಿಕರಣಕ್ಕೆ ಅವಕಾಶ ಕಲ್ಪಿಸಲಾಗದು ಎಂಬುದಾಗಿ ಹೇಳಿದೆ.

"ನಮಗೆ ರಾಷ್ಟ್ರದಲ್ಲಿ ತಾಲಿಬಾನಿಗಳು ಇರುವ ಇಚ್ಚೆಇಲ್ಲ. ನಾಳೆ ಒಬ್ಬ ವಿದ್ಯಾರ್ಥಿನಿ ಬಂದು ತಾನು ಬುರ್ಖಾ ಧರಿಸಲು ಇಚ್ಚಿಸುವುದಾಗಿ ಹೇಳಬಹುದು. ಇದಕ್ಕೆ ಅವಕಾಶ ನೀಡಲು ಸಾಧ್ಯವೇ" ಎಂಬುದಾಗಿ ನ್ಯಾಯಮೂರ್ತಿ ಮಾರ್ಖಾಂಡೇಯ ಕಟ್ಜು ಹೇಳಿದ್ದಾರೆ.

ನ್ಯಾಯಮೂರ್ತಿ ರವೀಂದ್ರನ್ ನೇತೃತ್ವದ ನ್ಯಾಯಪೀಠದ ಅಂಗವಾಗಿರುವ ಕಟ್ಜು ಅವರು, ತಾನು ಸಂಪೂರ್ಣವಾಗಿ ಜಾತ್ಯತೀತ. ಆದರೆ, ಧಾರ್ಮಿಕ ನಂಬುಗೆಗಳು ಮಿತಿಮೀರಬಾರದು ಎಂದು ಹೇಳಿದರು. "ನಾನೊಬ್ಬ ಜಾತ್ಯಾತೀತವಾದಿ. ಹಕ್ಕುಗಳು ಮತ್ತು ವೈಯಕ್ತಿಕ ನಂಬುಗೆಗಳ ನಡುವೆ ನಾವು ಸಮತೋಲನ ಕಾಯ್ದುಕೊಳ್ಳಬೇಕು. ನಾವು ಜಾತ್ಯತೀತತೆಯನ್ನು ಮಿತಿಗಿಂತ ಹೆಚ್ಚು ಜಗ್ಗಬಾರದು" ಎಂದು ಪ್ರಖರ ಹೇಳಿಕೆಗಳಿಗೆ ಹೆಸರಾಗಿರುವ ಕಟ್ಜು ನುಡಿದರು.

ವಿದ್ಯಾರ್ಥಿಗಳು ನೀಟಾಗಿ ಕ್ಷೌರ ಮಾಡಿಸಿಕೊಂಡು ಬರಬೇಕು ಎಂಬ ಶಾಲಾ ನಿಯಮವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಮೊಹಮ್ಮದ್ ಸಲೀಮ್ ಎಂಬ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅವರು ನಡೆಸುತ್ತಿದ್ದರು. ಸಲೀಂ ಮಧ್ಯಪ್ರದೇಶದಲ್ಲಿನ ಸರ್ಕಾರಿ ಅಂಗೀಕೃತ ಅಲ್ಪಸಂಖ್ಯಾತ ಸಂಸ್ಥೆಯ ನಿರ್ಮಲ ಕಾನ್ವೆಂಟ್ ಹೈಯರ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾನೆ.

ಮಧ್ಯಪ್ರದೇಶ ಹೈಕೋರ್ಟ್ ತನ್ನ ಅರ್ಜಿಯನ್ನು ವಜಾ ಮಾಡಿರುವುದನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ತತ್ವಗಳನ್ನು ಅನುಸರಿಸುವ ಹಕ್ಕಿದೆ. ಮತ್ತು ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬುದಾಗಿ ಆತ ತನ್ನ ಅರ್ಜಿಯಲ್ಲಿ ವಾದಿಸಿದ್ದ.

ಗಡ್ಡಧಾರಣೆಯು ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ ಎಂದು ಸಲೀಂ ಪರ ವಕೀಲ ಬಿ.ಎ. ಖಾನ್ ಅವರು ವಾದಿಸಿದ್ದರು. ಆದರೆ ಈ ವಾದದಿಂದ ತೃಪ್ತರಾಗದ ಕಟ್ಜು ಅವರು, "ಆದರೆ ನೀವು ಗಡ್ಡಧರಿಸಿಲ್ಲ" ಎಂದು ತಿರುಗಿ ವಕೀಲರನ್ನೇ ಪ್ರಶ್ನಿಸಿದರು.

ಸಂವಿಧಾನದ 30ನೆ ವಿಧಿಯು ಒದಗಿಸಿರುವ ಹಕ್ಕಿನ ಪ್ರಕಾರ ಅಲ್ಪಸಂಖ್ಯಾತ ಸಂಸ್ಥೆಯು ತನ್ನದೇ ನೀತಿನಿಯಮಾವಳಿಗಳನ್ನು ಹೊಂದಿರುತ್ತವೆ ಮತ್ತು ಇದನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ನುಡಿದರು.
"ಅಲ್ಲಿ ನಿಯಮಗಳಿದ್ದರೆ ನೀವದನ್ನು ಅನುಸರಿಸಲೇ ಬೇಕು. ನಾನು ಸಮವಸ್ತ್ರ ತೊಡಲಾರೆ, ನಾನು ಬುರ್ಖಾ ಮಾತ್ರ ಧರಿಸುತ್ತೇನೆ ಎಂದು ನೀವು ಹೇಳಲು ಸಾಧ್ಯವಿಲ್ಲ" ಎಂದು ನ್ಯಾಯಾಪೀಠ ಅಭಿಪ್ರಾಯಿಸಿತು.

ಅಲ್ಲದೆ, ಶಾಲೆಯ ನೀತಿನಿಯಮಗಳನ್ನು ಅನುಸರಿಸಲು ಸಾಧ್ಯವಿಲ್ಲ ಎಂದಾದರೆ, ಬೇರೆ ಶಾಲೆಗೆ ಸೇರಿಕೊಳ್ಳಬಹುದೇ ವಿನಹ ಶಾಲೆಯ ನಿಯಮಗಳನ್ನು ಬದಲಿಸುವಂತೆ ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಕಟ್ಜು ಹೇಳಿದರು.

ಸಲೀಂ ಅವರ ವಕೀಲರು ಸಂವಿಧಾನದ 25ನೆ ವಿಧಿಯನ್ನು ಉದ್ದರಿಸಿ, ಈ ವಿಧಿಯ ಅನುಸಾರ ಸಲೀಂ ತನ್ನ ಧಾರ್ಮಿಕ ತತ್ವಗಳನ್ನು ಪಾಲಿಸುವ ಹಕ್ಕನ್ನು ಹೊಂದಿದ್ದಾನೆ ಎಂದು ವಾದಿಸಿದರು. ಆತನನ್ನು ಶಾಲೆ ತೊರೆಯುವಂತೆ ಹೇಳುವುದು ಆತನ ಧಾರ್ಮಿಕ ಅಂತಸಾಕ್ಷಿ, ನಂಬುಗೆ ಹಾಗೂ ಆತನ ಕೌಟುಂಬಿಕ ಸಂಪ್ರದಾಯಕ್ಕೆ ವಿರುದ್ಧವಾದುದು ಎಂದು ನುಡಿದರು. ಅಲ್ಲದೆ. ಸಿಖ್ ಧರ್ಮದ ಸದಸ್ಯರಿಗೆ ಗಡ್ಡಧರಿಸಲು ಮತ್ತು ಟರ್ಬನ್ ತೊಡಲು ಅವಕಾಶವಿದೆ ಎಂಬುದನ್ನು ಬೆಟ್ಟುಮಾಡಿದರು. ಅಲ್ಲದೆ ಶಾಲೆಯ ಈ ನಿಯಮ ಪಕ್ಷಪಾತಿತನದಿಂದ ಕೂಡಿದೆ ಎಂದು ವಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಂಜಾಬ್: ಅಪಘಾತದಲ್ಲಿ 20 ಯಾತ್ರಿಕರ ದುರ್ಮರಣ
ಅಂಜಲಿ ಮನೆಮೇಲೆ ದಾಳಿ, ಕಸಬ್ ಪ್ರಕರಣದಿಂದ ಹಿಂತೆಗೆತ
ಮಾಹಿತಿ ಹಕ್ಕು ನಿರಾಕರಿಸಿದರೆ ದಂಡ
ಕೇರಳದಲ್ಲಿ ಕಟ್ಟೆಚ್ಚರ
ವರುಣ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ: ವಿಹಿಂಪ
ವರುಣ್‌ಗೆ ಜಾಮೀನು, ಆದರೆ ಬಿಡುಗಡೆ ಇಲ್ಲ