" ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮೊಮ್ಮಗ ರಾಷ್ಟ್ರಕ್ಕೆ ಅಪಾಯಕಾರಿಯಾಗಿ ಪರಿಣಮಿಸಲು ಹೇಗೆ ಸಾಧ್ಯ" ಎಂದು ಪ್ರಶ್ನಿಸಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ವರುಣ್ ಹೇಳಿಕೆಯು ರಾಷ್ಟ್ರಕ್ಕೆ ಅಪಾಯವೆಂದಾದರೆ, 80 ಕೋಟಿ ಹಿಂದೂಗಳನ್ನು ಎನ್ಎಸ್ಎಯಡಿ ಬಂಧಿಸಿ ಎಂದು ಹೇಳಿದ್ದಾರೆ." ಸೋನಿಯಾ ಗಾಂಧಿ ಹದಿನೇಳು ವರ್ಷಗಳ ಕಾಲ ಭಾರತೀಯ ಪೌರತ್ವವನ್ನು ಪಡೆಯದೆ ಇಂದಿರಾಗಾಂಧಿ ನಿವಾಸದಲ್ಲಿ ನೆಲೆಸಿದ್ದಾಗ ಇದು ರಾಷ್ಟ್ರಕ್ಕೆ ಅಪಾಯ ಎಂದು ಯಾರೂ ಚಿಂತಿಸಿರಲಿಲ್ಲ" ಎಂದು ಅವರು ವ್ಯಂಗ್ಯವಾಡಿದ್ದಾರೆ." ಲಕ್ಷಾಂತರ ಬಾಂಗ್ಲಾದೇಶಿಗರು ಭಾರತಕ್ಕೆ ಅಕ್ರಮವಾಗಿ ನುಸುಳುತ್ತಾರೆ. ಇವರನ್ನು ಕಾಂಗ್ರೆಸಿಗರು ತಮ್ಮ ಮತದಾರರನ್ನಾಗಿಸಿ ಚುನಾವಣೆ ಗೆಲ್ಲುತ್ತಾರೆ. ಕುಟುಂಬ ಯೋಜನೆಯನ್ನು ತಿರಸ್ಕರಿಸುವ ಮುಸ್ಲಿಮರ ಜನಸಂಖ್ಯೆಯು ಕ್ಷಿಪ್ರಗತಿಯಲ್ಲಿ ದುಪ್ಪಟ್ಟುಗೊಳ್ಳುತ್ತಿರುವುದು ರಾಷ್ಟ್ರದ ಭದ್ರತೆಗೆ ಬೆದರಿಕೆ ಎಂದು ಯಾರೂ ಚಿಂತಿಸುವುದಿಲ್ಲ. ಆದರೆ ಇನ್ನೂ ಮೀಸೆ ಮೊಳೆಯಬೇಕಿರುವ ಹುಡುಗನೊಬ್ಬನನ್ನು ರಾಷ್ಚ್ರಕ್ಕೆ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದೆ" ಎಂದು ಶಿವಸೇನಾ ಮುಖ್ಯಸ್ಥ ವಿಶ್ಲೇಷಿಸಿದ್ದಾರೆ.ವರುಣ್ ಗಾಂಧಿ ಅವರನ್ನು, ಅವರ ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಜೈಲಿಗೆ ತಳ್ಳಿರುವುದು ಹಿಂದೂಗಳಿಗೆ ನೀಡಿರುವ ಎಚ್ಚರ ಹಾಗೂ ಇದು ಮುಸ್ಲಿಂ ಮತಬ್ಯಾಂಕಿನ ಓಲೈಕೆಯಲ್ಲದೆ ಮತ್ತೇನು ಅಲ್ಲ ಎಂದು ಅವರು ಶಿವಸೇನೆಯ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಹೇಳಿದ್ದಾರೆ. " ಮಾಯಾವತಿ ಸರ್ಕಾರವು ವರುಣ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಿ ಅವರನ್ನು ಜೈಲಿಗೆ ತಳ್ಳಿರುವ ರೀತಿಯು ಮುಸ್ಲಿಂ ಮತಬ್ಯಾಂಕಿನ ತುಷ್ಟೀಕರಣವಲ್ಲದೆ ಮತ್ತೇನೂ ಅಲ್ಲ. ಇದು ಹಿಂದೂಗಳಿಗೆ ಎಚ್ಚರಿಕೆ" ಎಂದು ಹೇಳಿದ್ದಾರೆ." ವರುಣ್ ಮಾಡಿರುವ ಅವಹೇಳನಕಾರಿ ಭಾಷಣಕ್ಕೆ ಪ್ರತಿಯಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದಾದರೂ, ಅವರ ವಿರುದ್ಧ ಎನ್ಎಸ್ಎ ಹೇರಿ ಕಂಬಿಗಳ ಹಿಂದೆ ತಳ್ಳಿವುದಕ್ಕೆ ಏನು ಸಮರ್ಥನೆ" ಎಂದವರು ಪ್ರಶ್ನಿಸಿದ್ದಾರೆ. |