ನವದೆಹಲಿ: ಬಿಜೆಪಿ ಯುವನಾಯಕ ವರುಣ್ ಗಾಂಧಿಯ 'ಕೈಕತ್ತರಿಸುವ' ವೈರಸ್ ರಾಷ್ಟ್ರವ್ಯಾಪಿ ಪಸರಿಸುತ್ತಿದೆ.
ಕರ್ನಾಟಕದ 'ಕತ್ತರಿಸಿ, ಕೊಚ್ಚಿ, ತಿಥಿ ಮಾಡಿ'ದ ಬಳಿಕ ಇದೀಗ 'ಈ ಕತ್ತರಿಸುವ ಸಂಸ್ಕೃತಿ' ಆಂಧ್ರಕ್ಕೆ ದಾಟಿದೆ. ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಶ್ರೀನಿವಾಸ್ ಅವರೀಗ "ಅಲ್ಪಸಂಖ್ಯಾತರತ್ತ ಬೆಟ್ಟು ಮಾಡುವವರ ಕೈಯನ್ನು ಕೊಚ್ಚಿ ಹಾಕುತ್ತೇನೆ" ಎಂದು ತೊಡೆತಟ್ಟಿದ್ದಾರೆ.
ನಿಜಾಮಾಬಾದಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಶ್ರೀನಿವಾಸ್ ಈ ಉದ್ರೇಕಕಾರಿ ಹೇಳಿಕೆ ನೀಡಿದ್ದು, ಬಿಜೆಪಿಯು ಇದರ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಈ ಹೇಳಿಕೆ ಆಕ್ಷೇಪಾರ್ಹವಾದುದು ಎಂದಿದೆ.
ಮುಸ್ಲಿಂಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಮೂಲಕ ಮತಗಳಿಸಲು ಇಂತಹ ಸೇಡಿನ ನುಡಿಗಳನ್ನು ಆಡಲಾಗಿದೆ ಎಂದು ಬಿಜೆಪಿ ದೂರಿದೆ.
ಚುನಾವಣಾ ಅಧಿಕಾರಿ ಅವರು ಈ ಭಾಷಣದ ಚಿತ್ರಣವನ್ನು ಮಂಗಳವಾರ ವೀಕ್ಷಿಸಲಿದ್ದು, ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆ.
ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಪರ ಎಂಬುದನ್ನು ಬಿಂಬಿಸಲು ಶ್ರೀನಿವಾಸ್ ಅವರು ಈ ಅತಿರೇಕದ ಹೇಳಿಕೆ ನೀಡಿದ್ದಾರೆ. ಸೋಮವಾರದ ತನ್ನ ಹೇಳಿಕೆಗೆ ಮಂಗಳವಾರವೂ ಪೂರಕ ಹೇಳಿಕೆ ನೀಡಿರುವ ಶ್ರೀನಿವಾಸ್ "ನಾನು ತಲೆದಂಡಕ್ಕೆ ಸಿದ್ಧ. ಯಾರೇ ಆದರೂ, ಯಾವುದೇ ಮುಸ್ಲಿಮರ ವಿರುದ್ಧ ಬೆರಳೆತ್ತಲು ನಾನು ಬಿಡಲಾರೆ" ಎಂದಿದ್ದಾರೆ.
ತನ್ನ ಹೇಳಿಕೆಯು ಕೋಮುಹಿಂಸಾಚಾರವನ್ನು ತಡೆಯುವುದೇ ವಿನಹ ಇಂತಹ ಹಿಂಸಾಚಾರವನ್ನು ಹೆಚ್ಚಿಸುವುದಲ್ಲ ಎಂದು ಶ್ರೀನಿವಾಸ್ ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. "ಚುನಾವಣಾ ಆಯೋಗ ಮತ್ತು ಮಾಧ್ಯಮಗಳಿಗೆ ಇದು ಸತ್ವಪರೀಕ್ಷೆಯ ಕಾಲ. ಇದೀಗ ಕೇಂದ್ರ ಚುನಾವಣಾ ಆಯೋಗವು ಶ್ರೀನಿವಾಸ್ ಅವರನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್‌ಗೆ ಸಲಹೆ ನೀಡುತ್ತದೆಯೇ ಮತ್ತು ಅವರನ್ನು ಆಂಧ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಿದೆಯೇ" ಎಂದು ಬಿಜೆಪಿ ಪ್ರಶ್ನಿಸಿದೆ.
ಇದೇ ವೇಳೆ ವರುಣ್ ಅವರನ್ನು ರೋಲರ್ ಕೆಳಗೆ ಹಾಕಿ ಪುಡಿಗಟ್ಟುತ್ತಿದ್ದೆ ಎಂದು ಹೇಳಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ವಿರುದ್ಧವೂ ವರುಣ್ ವಿರುದ್ಧ ಕೈಗೊಂಡಿರುವ ಕ್ರಮಗಳನ್ನೇ ಕೈಗೊಳ್ಳಲಾಗುತ್ತದೆಯೇ ಎಂದೂ ಕೇಸರಿ ಪಕ್ಷ ಪ್ರಶ್ನಿಸಿದೆ. "ಶ್ರೀನಿವಾಸ್‌ರದ್ದು ಸಂಪೂರ್ವಾಗಿ ಹಿಂಸಾಚಾರದ ಹೇಳಿಕೆಯಾಗಿದೆ. ಇಂತಹ ಹೇಳಿಕೆ ನೀಡಿರುವ ವರುಣ್ ಜೈಲಿನಲ್ಲಿರುವ ವೇಳೆ ಶ್ರೀನಿವಾಸ್ ಯಾಕೆ ಬಂಧನಕ್ಕೀಡಾಗಿಲ್ಲ" ಎಂದು ಬಿಜೆಪಿ ವಕ್ತಾರ ಬಲ್ಬೀರ್ ಪಂಜ್ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
'ಕತ್ತರಿಸುವ' ಸರಣಿ ಕಾಂಗ್ರೆಸ‌್‌ನ ಕಾಗೋಡು ತಿಮ್ಮಪ್ಪ ಸೊರಬದಲ್ಲಿ ಹಿಂದುತ್ವವಾದಿಗಳ ಕೈಕತ್ತರಿಸಿ ಎಂದಿದ್ದರೆ, ಬಿಜೆಪಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ದಾವಣಗೆರೆಯಲ್ಲಿ ಹಿಂದೂಗಳ ವಿರುದ್ಧ ಮಾತಾಡುವವರ ತಲೆ ಕತ್ತರಿಸಿ ಎಂದಿದ್ದರು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ವಕ್ತಾರ ಚಿಕ್ಕಮಗಳೂರಿನ ಸಿ.ಟಿ. ರವಿ ಹಿಂದುತ್ವದ ವಿರುದ್ಧ ಮಾತನಾಡುವವರು ಹಿಂದೂಗಳ ಕೈ ಕತ್ತರಿಸುವ ಮುನ್ನ ಅವರ ತಿಥಿ ಮಾಡುತ್ತೇವೆ ಎಂದಿದ್ದರು. ಬಿಹಾರದಲ್ಲಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು "ನಾನುಗೃಹ ಸಚಿವನಾಗಿದ್ದರೆ, ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ವರುಣ್ ಅವರನ್ನು ಮುಂಬರುವ ಯಾವುದೇ ಪರಿಣಾಮಗಳನ್ನು ಲೆಕ್ಕಿಸದೆ ರೋಲರ್ ಅಡಿಗೆ ಹಾಕಿ ಪುಡಿಗಟ್ಟುತ್ತಿದ್ದೆ" ಎಂಬ ಮಾತುಗಳನ್ನು ಆಡಿದ್ದರು. |