ಪತ್ರಿಕಾಗೋಷ್ಠಿಯೊಂದರಲ್ಲಿ ಗೃಹ ಸಚಿವ ಚಿದಂಬರಂ ಮೇಲೆ ಸಿಖ್ ಪತ್ರಕರ್ತನೊಬ್ಬ ಬೂಟೆಸೆದ ಘಟನೆ ಹಸಿಹಸಿಯಾಗಿರುವಾಗಲೇ, ಇದೀಗ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಅವರತ್ತ ಪಕ್ಷದ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದ ಘಟನೆ ವರದಿಯಾಗಿದೆ. ಇದರಿಂದಾಗಿ, ಚಪ್ಪಲಿ ಎಸೆಯುವ ಘಟನೆ ರಾಷ್ಟ್ರದಲ್ಲಿ ಸಾಂಕ್ರಾಮಿಕವಾಗತೊಡಗಿದೆ.
ಮಧ್ಯಪ್ರದೇಶದ ಕಾಟ್ನಿಯಲ್ಲಿ ನಡೆಸಿದ ಚುನಾವಣಾ ರ‌್ಯಾಲಿಯಲ್ಲಿ ಕಾಟ್ನಿ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಪವಾಸ್ ಅಗರ್‌ವಾಲ್ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪಕ್ಷದೊಳಗಿನ ಗುಂಪುಗಾರಿಕೆಯಿಂದಾಗಿ ತನ್ನನ್ನು ಜಿಲ್ಲಾಧ್ಯಕ್ಷ ಪದವಿಯಿಂದ ಕಿತ್ತು ಹಾಕಿದ್ದಕ್ಕೆ ಬೇಸರಗೊಂಡು ಆತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಆಡ್ವಾಣಿ ಅವರು ವೇದಿಕೆ ಏರಿದ ಕೆಲವೇ ಕ್ಷಣಗಳಲ್ಲಿ ಆತ ಚಪ್ಪಲಿ ತೂರಿದ್ದು, ಅದು ಆಡ್ವಾಣಿ ಅವರ ಪಕ್ಕದಲ್ಲಿ ಬಿತ್ತು ಎಂದು ತಿಳಿದುಬಂದಿದೆ. ಚಪ್ಪಲಿ ಎಸೆದಿರುವ ಪವಾಸ್‌ನನ್ನು ತಕ್ಷಣಕ್ಕೆ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆತನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಇತ್ತೀಚೆಗೆ ಗೃಹ ಸಚಿವ ಪಿ.ಚಿದಂಬರಂ ಅವರ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತನೊಬ್ಬ ಅವರತ್ತ ಶೂ ಎಸೆದಿದ್ದ. ಆ ಬಳಿಕ ಕುರುಕ್ಷೇತ್ರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ನವೀನ್ ಜಿಂದಾಲ್ ಅವರತ್ತ ನಿವೃತ್ತ ಮುಖ್ಯಾಧ್ಯಾಪಕರೊಬ್ಬರು ಚಪ್ಪಲಿ ಎಸೆದಿದ್ದರು. |