ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಬಂಧಿತ ಏಕೈಕ ಪಾಕಿಸ್ತಾನಿ ಉಗ್ರಗಾಮಿ ಮಹಮದ್ ಅಜ್ಮಲ್ ಅಮೀರ್ ಕಸಬ್, ನಿಜಕ್ಕೂ ಬಾಲಾಪರಾಧಿಯೇ ಎಂದು ಪತ್ತೆ ಹಚ್ಚುವಂತೆ ವಿಶೇಷ ನ್ಯಾಯಾಲಯವು ಆದೇಶಿಸಿದ್ದು, ಬಾಲಾಪರಾಧಿ ಎಂಬುದೇನಾದರೂ ಸಾಬೀತಾದರೆ ಆತನಿಗೆ ಕೇವಲ ಮೂರು ವರ್ಷ ಜೈಲು ಶಿಕ್ಷೆಯಾಗಬಹುದಾಗಿದೆ.ಮುಂಬೈ ಮೇಲಿನ ದಾಳಿ ಸಂದರ್ಭದಲ್ಲಿ ಕಸಬ್ 18 ವರ್ಷ ಮೇಲ್ಪಟ್ಟಿದ್ದನೇ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವೈದ್ಯರು ಮತ್ತು ಜೈಲರುಗಳನ್ನೊಳಗೊಂಡ ಸಾಕ್ಷಿಗಳನ್ನು ವಿಚಾರಣೆಗೆ ಗುರಿಪಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರಿಗೆ ನ್ಯಾಯಾಧೀಶ ಎಂ.ಎಲ್.ತಹಿಲ್ಯಾನಿ ಅವರು ಏಪ್ರಿಲ್ 28ರ ಗಡುವು ವಿಧಿಸಿದ್ದಾರೆ.ಕಸಬ್‌ನನ್ನು ಮೂಳೆ ಪರೀಕ್ಷೆ ಮತ್ತು ದಂತ ಪರೀಕ್ಷೆಗೆ ಒಳಪಡಿಸಿ ಆತನ ಪ್ರಾಯ ಪತ್ತೆ ಹಚ್ಚುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ. ಏಪ್ರಿಲ್ 28ರಂದು ಅಥವಾ ಅದರೊಳಗೆ ಈ ಕುರಿತು ವರದಿ ಸಲ್ಲಿಸುವಂತೆ ರೇಡಿಯಾಲಜಿಸ್ಟ್ ಮತ್ತು ದಂತ ತಜ್ಞರಿಗೆ ಆದೇಶ ನೀಡಲಾಗಿದೆ.ಭಾರಿ ಭದ್ರತೆಯ ನಡುವೆ ಕಸಬ್‌ನನ್ನು ಈ ಪರೀಕ್ಷೆಗಳಿಗೆ ಗುರಿಪಡಿಸಲಾಗುತ್ತದೆ ಎಂದು ಕಸಬ್ ವಕೀಲ ಅಬ್ಬಾಸ್ ಕಾಜ್ಮಿ ತಿಳಿಸಿದ್ದಾರೆ.ವಿಚಾರಣೆ ಸಂದರ್ಭ ಕಸಬ್ ಒಬ್ಬ ಬಾಲಾಪರಾಧಿ (18 ವರ್ಷಕ್ಕಿಂತ ಕೆಳಗಿನವನು) ಎಂಬುದು ದೃಢಪಟ್ಟಲ್ಲಿ, ಆ ಕೇಸನ್ನು ಬಾಲಾಪರಾಧ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಬಾಲಾಪರಾಧ ಕಾನೂನಿನಡಿ ವಿಧಿಸಬಹುದಾದ ಗರಿಷ್ಠ ಶಿಕ್ಷೆ ಎಂದರೆ ಮೂರು ವರ್ಷ ಜೈಲು ಶಿಕ್ಷೆ ಎಂದು ಕಾಜ್ಮಿ ಹೇಳಿದ್ದಾರೆ.ಕಸಬ್ ಮೇಲೆ ಆಪಾದನೆ ಹೊರಿಸುವ ಮುನ್ನ ಆತನ ವಯಸ್ಸು ನಿರ್ಧರಿಸಬೇಕು ಎಂದು ಪ್ರಾಸಿಕ್ಯೂಟರ್ ನಿಕಾಮ್ ಅವರು ಕೋರಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಮೊದಲು, ತನ್ನ ಪರ ವಾದಿಸಲು ವಕೀಲರನ್ನು ನೇಮಿಸಿದ ತಕ್ಷಣವೇ, ತನ್ನ ವಯಸ್ಸು ಕಡಿಮೆಯಿದ್ದು, ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಕಸಬ್ ಕೋರಿದ್ದ. ಆದರೆ ಇದನ್ನು ನ್ಯಾಯಾಲಯ ತಳ್ಳಿ ಹಾಕಿತ್ತಾದರೂ, ಈ ಬಗ್ಗೆ ನ್ಯಾಯಾಲಯಕ್ಕೆ ಅನುಮಾನ ಬಂದಲ್ಲಿ ಮಾತ್ರ ಯಾವುದೇ ಸಂದರ್ಭದಲ್ಲಿ ವಯಸ್ಸಿನ ಕುರಿತು ತನಿಖೆ ನಡೆಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿತ್ತು. |