ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಸಿದ್ದ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು, ತಾನು ರಾಮಾಯಣದ ಕುರಿತು ಟೀಕಿಸುವುದನ್ನು ಮುಂದುವರಿಸುವೆ ಎಂದು ಹೇಳಿದ್ದಾರೆ.
"ಚಿಕ್ಕ ವಯಸ್ಸಿನಲ್ಲೇ ನಾನು ರಾಮಾಯಣವನ್ನು ಟೀಕಿಸುತ್ತಿದ್ದೆ. ಅದನ್ನು ನಾನು ಮುಂದುವರಿಸುತ್ತೇನೆ" ಎಂದು ಅವರು ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಕನ್ನಡದ ರಾಮಾಯಣ ಮಹಾನ್ವೇಷಣಂ ಪುಸ್ತಕದ ತಮಿಳು ಆವೃತ್ತಿ 'ರಾಮಾಯಣ ಪೆರುಂತೆಡಲ್' ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
"ಮೊಯ್ಲಿ ಅವರ ರಾಮಾಯಣ ನಿರೂಪಣೆಯು ಕ್ರಾಂತಿಕಾರಿಯಾಗಿರುವ ಕಾರಣ ತಾನು ಈ ಪುಸ್ತಕ ಬಿಡುಗಡೆಗೆ ಒಪ್ಪಿಗೆ ನೀಡಿದೆ" ಎಂಬುದಾಗಿ ಅವರು ನುಡಿದರು. ತಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ ಎಂದು ನುಡಿದ ಕರುಣಾನಿಧಿ, ಮೊಯ್ಲಿ ಅವರ ಪುಸ್ತಕವು ಮೂಲ ರಾಮಾಯಣಕ್ಕಿಂತ ಭಿನ್ನವಾಗಿದೆ. ಮೊಯ್ಲಿ ಅವರು ತಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ಪದ್ಯರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದರು.
ಸೇತುಸಮುದ್ರಂ ಯೋಜನೆಯ ವಿವಾದದ ವೇಳೆಗೆ ಕರುಣಾನಿಧಿ ಅವರು ಭಗವಾನ್ ರಾಮ ಎಂಬುದು ಒಂದು 'ಕಾಲ್ಪನಿಕ ಪಾತ್ರ' ಎಂದು ಹೇಳಿದ್ದರು. ರಾಮ ಸೇತು ಮಾನವ ನಿರ್ಮಿತವಲ್ಲ ಎಂದು ಹೇಳುವ ಮೂಲಕ ಅವರು ರಾಷ್ಟ್ರಾದ್ಯಂತ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಎದುರಿಸಿದ್ದರು.
ತನ್ನ ಪುಸ್ತಕವು ಬರಿಯ ರಾಮಯಣದ ಕಥೆಯಲ್ಲ, ಪ್ರತಿಪುಟದಲ್ಲಿಯೂ ಓದುಗರಿಗೆ ಸಂದೇಶವಿದೆ ಎಂದು ಮೊಯ್ಲಿ ನುಡಿದರು.
ಮಹಾಪಾತ್ರದ ಪ್ರಮುಖ ಪಾತ್ರಗಳಲ್ಲೊಂದಾದ ದ್ರೌಪತಿಯ ಕುರಿತು ಮೊಯ್ಲಿ ಅವರು ಪುಸ್ತಕವೊಂದನ್ನು ಬರೆಯುತ್ತಿದ್ದು, ಅದು ಒಂದು ವರ್ಷದೊಳಗೆ ಬಿಡುಗಡೆಯಾಗಲಿದೆ. |