ಕೊನೆಗೂ ಪ್ರತಿಪಕ್ಷವೊಂದು ಕೆಲಸ ಮಾಡುತ್ತಿದೆ ಎಂಬುದು ಜನತೆಗೆ ತಿಳಿಯಿತು. ಬಹುತೇಕ ಕಳೆದ ಒಂದು ವರ್ಷದಿಂದ ದೇಶದ ಪ್ರಜೆಗಳು ಅನುಭವಿಸುತ್ತಿರುವ ಬೆಲೆ ಏರಿಕೆಯ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಮೊಳಗಿಸಲು ವಿರೋಧ ಪಕ್ಷಗಳು ಸಫಲವಾಗಿದ್ದು, ಈ ಬಗ್ಗೆ ಚರ್ಚೆಯಾಗಬೇಕೆಂದು ಸಂಸದರು ಮಂಗಳವಾರ ಗದ್ದಲ ಮಾಡಿದ ಹಿನ್ನೆಲೆಯಲ್ಲಿ ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಬೇಕಾಯಿತು.
ಇದಕ್ಕೆ ಮೊದಲು ಬೆಲೆ ಏರಿಕೆ ವಿಷಯದಲ್ಲಿ ಅವರು ಸಂಸತ್ತಿನ ಹೊರಗೆ ಧರಣಿ ನಡೆಸಿದ್ದರು. ಆದರೆ, ವಿಷಯವನ್ನು ಕೈಗೆತ್ತಿಕೊಂಡದ್ದು ಎಡಪಕ್ಷಗಳು, ತೆಲುಗು ದೇಶಂ, ಆರ್‌ಜೆಡಿ, ಎಐಎಡಿಎಂಕೆ ಮತ್ತು ಬಿಜು ಜನತಾ ದಳಗಳು. ಪ್ರಶ್ನಾ ವೇಳೆ ರದ್ದುಪಡಿಸಿ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗಬೇಕೆಂದು ಈ ಪಕ್ಷಗಳ ಸಂಸದರು ಒತ್ತಾಯಿಸಿದರು.
ಆದರೆ ಈ ಬೇಡಿಕೆಯನ್ನು ಸ್ಪೀಕರ್ ಮೀರಾ ಕುಮಾರ್ ತಳ್ಳಿಹಾಕಿದರು. ಯೋಜನಾಬದ್ಧ ಚರ್ಚೆಗೆ ಸರಕಾರ ಸಿದ್ಧವಿದೆ, ಆದರೆ ಇಂದು ಬರ ಕುರಿತ ಚರ್ಚೆಗೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದರು. ಅಲ್ಲದೆ, ಭಾರತ-ಪಾಕ್ ವಿವಾದಾತ್ಮಕ ಜಂಟಿ ಹೇಳಿಕೆಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಲಿದ್ದಾರೆ ಎಂದೂ ಅವರು ಹೇಳಿದರು.
ಆದರೆ, ಪ್ರಶ್ನಾ ವೇಳೆ ರದ್ದು ಮಾಡಿ ಬೆಲೆ ಏರಿಕೆ ಬಗ್ಗೆ ಚರ್ಚಿಸೋಣ ಎಂದು ಸಿಪಿಎಂನ ವಾಸುದೇವ ಆಚಾರ್ಯ ಹೇಳಿದರು. ಪ್ರತಿಭಟನೆ ಮಾಡುತ್ತಿದ್ದ ಸಂಸದರೆಲ್ಲರೂ ಘೋಷಣೆ ಕೂಗುತ್ತಾ ಸ್ಪೀಕರ್ ವೇದಿಕೆಯತ್ತ ನುಗ್ಗಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾದಾಗ ಸ್ಪೀಕರ್ ಅವರು ಸದನವನ್ನು ಅರ್ಧ ಗಂಟೆ ಮುಂದೂಡಿದರು.
ಇದಕ್ಕೆ ಮೊದಲು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಸಿಪಿಎಂನ ಬೃಂದಾ ಕರಾಟ್ ಮತ್ತು ಸೀತಾರಾಮ ಯೆಚೂರಿ ಹಾಗೂ ಸಿಪಿಐನ ಗುರುದಾಸ ದಾಸಗುಪ್ತಾ ನೇತೃತ್ವದಲ್ಲಿ ಸಂಸತ್ ಹೊರಗೆ ಧರಣಿ ನಡೆಯಿತು. ಆರ್‌ಜೆಡಿ, ಎಡಪಕ್ಷಗಳು, ಟಿಡಿಪಿ ಮತ್ತು ಬಿಜೆಡಿಗಳು ಈ ಬಗ್ಗೆ ದೇಶಾದ್ಯಂತ ರಸ್ತೆ ತಡೆ ನಡೆಸಲಿವೆ ಎಂದು ಲಾಲು ಘೋಷಿಸಿದರು.
ಇದರೊಂದಿಗೆ ಪ್ರತಿಪಕ್ಷಗಳು ಕೊನೆಗೂ ಜನರ ಬಗ್ಗೆ ಸ್ವಲ್ಪ ಮಟ್ಟಿನ ಕಾಳಜಿ ತೋರಿದಂತಾಗಿದೆ.