ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ವಿರುದ್ಧ ವಿರೋಧ ಪಕ್ಷದ ನಾಯಕರು ಮಾಡಿರುವ ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ, ಒಮರ್ ರಾಜ್ಯಪಾಲ ಮೋತಿಲಾಲ್ ವೋರಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯಪಾಲರು ರಾಜೀನಾಮೆ ಸ್ವೀಕರಿಸಿದ್ದಾರೆ.
ಇದಕ್ಕೂ ಮುಂಚಿತವಾಗಿ ವಿಧಾನ ಸಭೆಯಲ್ಲಿನ ಗದ್ದಲ ಕೋಲಾಹಲಗಳು ಎರಡನೆಯ ದಿನಕ್ಕೂ ಮುಂದುವರಿದಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಭಾವಾವೇಶಕ್ಕೊಳಗೊಂಡ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಾಜೀನಾಮೆಗೆ ಮುಂದಾದಾಗ ಅವರ ಪಕ್ಷದವರು ಅವರನ್ನು ರಾಜೀನಾಮೆ ನೀಡದಂತೆ ತಡೆದು ಪರಸ್ಪರ ತಳ್ಳಾಟ, ಎಳೆದಾಟಗಳೂ ಸಂಭವಿಸಿದವು. ವಿರೋಧಪಕ್ಷಗಳು ಮುಖ್ಯಮಂತ್ರಿಯವರ ಮೇಲೆ ಲೈಂಗಿಕ ಹಗರಣ ಒಂದರ ಆರೋಪ ಹೊರಿಸಿದಾಗ ಈ ಎಲ್ಲಾ ಸನ್ನಿವೇಶಗಳು ಎದುರಾದವು.
ಸದನದಲ್ಲಿನ ಗದ್ದಲ, ಕೋಲಾಹಲದ ನಡುವೆಯೇ ಪಿಡಿಪಿ ಸಂಸದ ಮುಜಾಫರ್ ಬಿಯಾಗ್ ಅವರು, ಮೂರು ವರ್ಷಗಳ ಹಿಂದಿನ ಕುಖ್ಯಾತ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ ಎಂದು ಆಪಾದಿಸಿ, ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ನೈತಿಕ ಹಕ್ಕು ಹೊಂದಿಲ್ಲ, ರಾಜೀನಾಮೆ ನೀಡಬೇಕು ಎಂದು ದೂರಿದರು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತ್ತು.
ಮೂರು ವರ್ಷಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ ಅವರು 102ನೆ ಆರೋಪಿಯಾಗಿದ್ದಾರೆ ಎಂದು ಶಾಸಕರು ಹೇಳಿದರು.
ಈ ಆರೋಪದಿಂದ ವ್ಯಗ್ರಗೊಂಡ ಒಮರ್, "ಕಾನೂನಿನ ಪ್ರಕಾರ ಒಬ್ಬ ಆರೋಪಿಯೊಬ್ಬ ದೋಷಿ ಎಂದು ತೀರ್ಮಾನವಾಗುವ ತನಕ ಆತ ನಿರಪರಾಧಿಯಾಗಿರುತ್ತಾನೆ. ಪಿಡಿಪಿ ಸದಸ್ಯರೊಬ್ಬರು ಇಂತಹ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರುವುದು ನನ್ನ ದುರಾದೃಷ್ಟ" ಎಂದರು.
"ನಾನು ನಿರ್ದೋಷಿ ಎಂದು ತೀರ್ಮಾನವಾಗುವ ತನಕ ತನಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಡಕಾಯಿತಿ, ಲೂಟಿ ಮುಂತಾದ ಆರೋಪಗಳಾದರೆ ನಿರ್ಲಕ್ಷಿಸಬಹುದಿತ್ತು. ಆದರೆ ಇದು ಗಂಭೀರ ಆಪಾದನೆ" ಎಂದು ಹೇಳಿದ ಒಮರ್ ಅವರು ತೀರಾ ಭಾವುಕರಾಗಿದ್ದು ಒಂದು ಹಂತದಲ್ಲಿ ಅವರ ಕಣ್ಣಂಚಿನಲ್ಲಿ ನೀರು ಮಡುಗಟ್ಟಿತ್ತು.
ಠನನ್ನ ವಿರುದ್ಧ ಮಾಡಲಾಗಿರುವ ಆರೋಪ ಸುಳ್ಳು. ಇದು ನನ್ನ ನಡತೆಗೆ ಕಳಂಕ. ಗೃಹ ಇಲಾಖೆ ತನಿಖೆ ನಡೆಸಿದರೂ ಯಾವ ಪ್ರಯೋಜನವೂ ಉಂಟಾಗದು. ನಾನು ನಿರಪರಾಧಿ ಎಂದು ಸಾಬೀತಾಗುವ ತನಕ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಾನು ಇಲ್ಲಿಂದಲೇ ಈಗಿಂದೀಗಲೇ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡುತ್ತೇನೆ" ಎಂದು ಅವರು ಹೊರಟರು.
ತಕ್ಷಣವೇ ಧಾವಿಸಿ ಬಂದ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಅವರು ಹೋಗದಂತೆ ತಡೆದರು. ರಾಜೀನಾಮೆ ನೀಡಬೇಡಿ, ನಮ್ಮ ಪಕ್ಷವು ಇದನ್ನು ಸ್ವೀಕರಿಸವುದಿಲ್ಲ ಎಂದು ಅವರು ನಡಿದರು.
ಆದರೆ ಪಟ್ಟು ಬಿಡದ ಓಮರ್, ಬಳಿಕ ತನ್ನ ತಂದೆ ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ತರೆಳಿ ಅವರೊಂದಿಗೆ ಚರ್ಚಿಸಿ, ಬಳಿಕ ಅವರೊಂದಿಗೆಯೇ ರಾಜ್ಯಾಪಾಲರ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.
ಒಮರ್ ರಾಜೀನಾಮೆಗೆ ಆಡಳಿತ ಪಕ್ಷ ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ) ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎನ್‌ಸಿಯ ಮಿತ್ರಪಕ್ಷವಾದ ಕಾಂಗ್ರೆಸ್ ಈ ಎಲ್ಲ ಬೆಳವಣಿಗೆಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಒಟ್ಟಾರೆ ಸರ್ಕಾರದ ಮುಂದಿನ ನಡೆಏನು ಎಂಬುದನ್ನು ಕಾದುನೋಡಬೇಕಿದೆ.