ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಕ್ಷಾಂತರ ಮಂದಿಯಿಂದ ವೈಎಸ್ಆರ್‌ಗೆ ಅಂತಿಮ ವಿದಾಯ (YS Rajshekar Reddy | Pulivendula | Kadapa)
 
ತಮ್ಮ ನೆಚ್ಚಿನ ನಾಯಕನ ಅಕಾಲಿಕ ಮರಣದಿಂದ ದುಃಖತಪ್ತರಾಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರು, ಅಂತಿಮ ನಮನ ಸಲ್ಲಿಸಲು ಹೈದರಾಬಾದ್ ಮತ್ತು ಪುಲಿವೆಂದುಲಾದತ್ತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಂಡೋಪತಂಡವಾಗಿ ಹರಿದು ಬಂದಿದ್ದಾರೆ.
WD

ಬುಧವಾರ ಸಂಭವಿಸಿರುವ ಹೆಲಿಕಾಫ್ಟರ್ ಅಪಘಾತದಲ್ಲಿ ಇತರ ನಾಲ್ವರೊಂದಿಗೆ ದುರ್ಮರಣ ಕಂಡಿರುವ ರೆಡ್ಡಿಯವರ ಸುಟ್ಟು ಕರಕಲಾದ ಛಿದ್ರಛಿದ್ರ ದೇಹವನ್ನು ತ್ರಿವರ್ಣ ವಸ್ತ್ರದಲ್ಲಿ ಸುತ್ತಿ ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ.

ಕಡಪ್ಪಾದಲ್ಲಿನ ರೆಡ್ಡಿಯವರ ಹುಟ್ಟೂರಾದ ಪುಲಿವೆಂದುಲಾದ ಇಡುಪುಲಪಾಯದತ್ತ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಯನ್ನು ನಡೆಸುವ ವೇಳೆ ಲಕ್ಷಾಂತರ ಮಂದಿ ತಮ್ಮ ಮೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿತು. ರೆಡ್ಡಿವರ ನಿವಾಸ ಹಾಗೂ ಅವರ ದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣ ಹಾಗೂ ಸುತ್ತುಮುತ್ತೆಲ್ಲ ಎಲ್ಲೆಂದರಲ್ಲಿ ಜನವೋ ಜನ. ದೂರದಿಂದ ಈ ಜನಸಾಗರವು ಜೇನ್ನೊಣಗಳು ಮುತ್ತಿದಂತೆ ಕಂಡು ಬರುತ್ತಿತ್ತು. 'ಜನಪ್ರೀಯತೆಯನ್ನು ವ್ಯಕ್ತಿ ಸತ್ತಾಗ ಅಳೆ' ಎಂಬ ಮಾತಿಗೆ ಅನ್ವರ್ಥ ಎಂಬಂತೆ, ಜನ ಸಾಮಾನ್ಯರು, ರಾಜಕಾರಣಿಗಳು, ಚಿತ್ರಕಲಾವಿದರು ಎಲ್ಲರೂ ಜಮಾಯಿಸಿ ಗೌರವ ಸಲ್ಲಿಸಿದರು.

ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್‌ನ ಗಣ್ಯರು, ರೆಡ್ಡಿ ಅವರ ನಿವಾಸಕ್ಕೆ ಶುಕ್ರವಾರ ಮುಂಜಾನೆ ತೆರಳಿ ಅಂತಿಮ ನಮನ ಸಲ್ಲಿಸಿ ಅವರ ಕಳೇಬರದ ಮೇಲೆ ಪುಷ್ಪಗುಚ್ಚಗಳನ್ನಿರಿಸಿದರು. ಬಳಿಕ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಅಲ್ಲಿ ಇರಿಸಲಾಗಿದ್ದ ಸಂತಾಪಸೂಚಕ ಪುಸ್ತಕದಲ್ಲಿ ತಮ್ಮ ಶೋಕ ಸಂದೇಶವನ್ನು ಅಕ್ಷರಕ್ಕಿಳಿಸಿದರು.

ಸೋನಿಯಾ ಹಾಗೂ ಇತರ ಗಣ್ಯರು ಅಂತಿಮ ನಮನ ಸಲ್ಲಿಸಿದ ಬಳಿಕ ಮೃತ ದೇಹವನ್ನು ಪುಷ್ಪಾಲಂಕೃತವಾಗಿದ್ದ ತೆರೆದ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಒಯ್ಯಲಾಯಿತು. ಮೊದಲು ನಾಂಪಲ್ಲಿಯಲ್ಲಿರುವ ಕಾಂಗ್ರೆಸ್ ಮುಖ್ಯಕಚೇರಿಯಾಗಿರುವ ಗಾಂಧಿಭವನಕ್ಕೆ ಒಯ್ಯಲಾಯಿತು. ಅಲ್ಲಿ ಸೇರಿದ್ದ ಕಾರ್ಯಕರ್ತರು ಅರ್ತನಾದ ಮೊಳಗಿಸಿದರು. ವೈಎಸ್ಆರ್ ಅಮರ್ ರಹೇ.... ಎಂಬ ಆಕ್ರಂದನ ಆಕಾಶ ಮುಟ್ಟಿತು.

ಇಲ್ಲಿಂದ ಬಳಿಕ ಶವಯಾತ್ರಿಯು ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ತೆರಳಿತು. ಇಲ್ಲಿ ಜನಸಾಮಾನ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಚಿಕ್ಕಪುಟ್ಟ ಗಾಯಗಳಾಗಿರುವ ಘಟನೆಯೂ ಸಂಭವಿಸಿದೆ. ಮಹಿಳೆಯರು, ವೃದ್ಧರೆನ್ನದೆ ಅಬಾಲ ವೃದ್ಧರಾದಿಯಾಗಿ ಜನರು ಕಣ್ಣಲ್ಲಿ ಕಂಬನಿ ಹರಿಸುತ್ತಾ ಅಂತಿಮ ನಮನ ಸಲ್ಲಿಸಲು ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕೆಲವು ಮಹಿಳೆಯರಂತೂ ಬ್ಯಾರಿಕೇಡ್‌ಗಳನ್ನು ಏರಿದರು. ಇವರನ್ನು ತಡೆಯಲು ಪೊಲೀಸರು ಯತ್ನಿಸಿ ವಿಫಲರಾದಾಗ, ಕೊನೆಗೆ ಅನಾಹುತ ಸಂಭವಿಸದಿರಲೆಂದು ಅವರಿಗೆ ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದರು. ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರೂ, ಸೂಕ್ತವಾದ ಎಚ್ಚರಿಕೆ ವಹಿಸಿದ್ದರೂ, ನಿರೀಕ್ಷೆಗೂ ಮೀರಿದ ಧುಮ್ಮಿಕ್ಕುವ ಜನತೆಯನ್ನು ಹತ್ತಿಕ್ಕುವುದು ಪೊಲೀಸರಿಗೆ, ಭದ್ರತಾ ಸಿಬ್ಬಂದಿಗಳಿಗೆ ಹರಸಾಹಸವೇ ಆಯಿತು.
WD

ಲಾಲ್‌ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಿಂದ ರೆಡ್ಡಿಯವರ ಕಳೇಬರವನ್ನು ನೇರವಾಗಿ ಪುಲಿವೆಂದುಲಾಕ್ಕೆ ಒಯ್ಯಲಾಗಿದೆ. ಇಲ್ಲಿ ಅವರ ನೆಚ್ಚಿನ ತೋಟದಲ್ಲಿ ಅವರ ಅಂತ್ಯಕ್ರಿಯೆಯು ಕ್ರೈಸ್ತ ಪದ್ಧತಿಯಂತೆ, ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಸಾಯಂಕಾಲ ಐದು ಗಂಟೆಗೆ ನಡೆಯಲಿದೆ. ಶವಸಂಸ್ಕಾರ ನಡೆಯಲಿರುವ ಅವರ ತೋಟದ ಸ್ಥಳದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಡಪ್ಪಾ ಹಾಗೂ ಹೈದರಾಬಾದ್‌ಗಳಿಂದ ಕ್ರೈಸ್ತ ಧರ್ಮಗುರುಗಳು ಆಗಮಿಸಲಿದ್ದು ಅಂತಿಮ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಿದ್ದಾರೆ. ಮೃತ ರೆಡ್ಡಿಯವರ ಸಹೋದರ ವಿವೇಕಾನಂದ ರೆಡ್ಡಿಯವರ ಉಸ್ತುವಾರಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆದಿವೆ.

ರಾಜಶೇಖರ ರೆಡ್ಡಿಯವರ ಕುಟುಂಬಿಕರನ್ನು ವಿಶೇಷ ವಿಮಾನದಲ್ಲಿ ಪುಲಿವೆಂದುಲಾದ ತೋಟಕ್ಕೆ ವಿಶೇಷ ಹೆಲಿಕಾಫ್ಟರ್‌ನಲ್ಲಿ ಕರೆದೊಯ್ಯಲಾಗಿದೆ. ರಾಜ್ಯದ, ರೈತರ, ಬಡವರ ಉದ್ಧಾರಕ್ಕೆ ಪಣತೊಟ್ಟ, ಜನಸಾಮಾನ್ಯರ ನಾಡಿಮಿಡಿತವನ್ನು ಅರಿತಿದ್ದ ಮಹಾನ್ ಶಕ್ತಿಯ ನಾಯಕನೊಬ್ಬ ಅಪಘಾತಕ್ಕೀಡಾದ ಹೆಲಿಕಾಫ್ಟರ್‌ನಿಂದ ಉರಿದು ಬಿದ್ದಿದ್ದು, ಧ್ರುವತಾರೆಯಂತೆ ಮಿನುಗಿ ಮರೆಯಾಗಿದ್ದಾರೆ.

ಕಾಂಗ್ರೆಸ್ ನಾಯಕರು, ಕೇಂದ್ರ ಸಚಿವರುಗಳು, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಮುಖ್ಯಮಂತ್ರಿಗಳು, ರಾಜ್ಯದಿಂದ ಸಚಿವರಾದ ವಿ.ಎಸ್. ಆಚಾರ್ಯ, ಸುರೇಶಕುಮಾರ್, ರೆಡ್ಡಿ ಸಹೋದರರು, ರಾಮಚಂದ್ರೇಗೌಡ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್. ಆರ್.ವಿ ದೇಶಪಾಂಡೆ, ವಿ.ಎಸ್ ಉಗ್ರಪ್ಪ ಸೇರಿದಂತೆ ಅನೇಕ ಗಣ್ಯರು ರೆಡ್ಡಿಯವರ ಅಂತಿಮ ದರ್ಶನ ಪಡೆದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ