ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಜಿನ್ನಾ' ಪುಸ್ತಕ ನಿಷೇಧ ರದ್ದುಪಡಿಸಿದ ಹೈಕೋರ್ಟ್ (Jinnah | Gujarat HC | Jaswant Singh | Jinnah: India, Partition, Independence)
ಅಹಮದಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 16:14 IST )
PTI
ಜಿನ್ನಾ ಕುರಿತು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಬರೆದ 'ಜಿನ್ನಾ-ಇಂಡಿಯಾ-ಪಾರ್ಟಿಷನ್-ಇಂಡಿಪೆಂಡೆನ್ಸ್' ಪುಸ್ತಕದ ಮೇಲೆ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಹೇರಿದ್ದ ನಿಷೇಧವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ರದ್ದುಪಡಿಸಿದೆ.
ಪುಸ್ತಕ ಮೇಲೆ ನಿಷೇಧ ಹೇರುವಂತಹ ಯಾವುದೇ ಅಂಶ ಅದರಲ್ಲಿ ಇಲ್ಲ ಎಂದಿರುವ ಹೈಕೋರ್ಟ್ ನ್ಯಾಯಪೀಠ, ಪುಸ್ತಕ ಮೇಲೆ ಹೇರಿರುವ ನಿಷೇಧ ಮೂಲಭೂತ ಹಕ್ಕಿಗೆ ಚ್ಯುತಿ ತಂದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
'ಪಾಕಿಸ್ತಾನ ವಿಭಜನೆಗೆ ನೆಹರು ಕಾರಣರೇ ಹೊರತು ಜಿನ್ನಾ ಅಲ್ಲ' ಎಂದು ಜಸ್ವಂತ್ ಸಿಂಗ್ ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಅವರ ಪುಸ್ತಕ ದೆಹಲಿಯಲ್ಲಿ ಬಿಡುಗಡೆಯಾದ ಎರಡು ದಿನಗಳ ಬಳಿಕ ಆಗಸ್ಟ್ 19ರಂದು ಗುಜರಾತ್ ಸರ್ಕಾರ ಪುಸ್ತಕದ ಮೇಲೆ ನಿಷೇಧ ಹೇರಿತ್ತು.
ಪುಸ್ತಕದಲ್ಲಿ ಜಿನ್ನಾ ಪರ ಜಸ್ವಂತ್ ತಳೆದ ಧೋರಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು. 'ಜಿನ್ನಾ-ಇಂಡಿಯಾ-ಪಾರ್ಟಿಷನ್-ಇಂಡಿಪೆಂಡೆನ್ಸ್' ಪುಸ್ತಕದ ಮೇಲೆ ಗುಜರಾತ್ ಸರ್ಕಾರ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಮುನ್ನ ರಾಜ್ಯ ಸರ್ಕಾರದ ವಕ್ತಾರ ಜಯ್ ನಾರಾಯಣ್ ವ್ಯಾಸ ಅವರು, ಜಸ್ವಂತ್ ಸಿಂಗ್ ಬರೆದ ಪುಸ್ತಕದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ವಿರುದಟ ಆಕ್ಷೇಪಾರ್ಹ ಟೀಕೆಗಳಿದ್ದವು ಎಂದು ಹೇಳಿ ಪುಸ್ತಕದ ಮೇಲಿನ ನಿಷೇಧವನ್ನು ಸಮರ್ಥಿಸಿಕೊಂಡಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಹೈಕೋರ್ಟ್ ಪುಸ್ತಕದ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ.
ತೀರ್ಪು ಖುಷಿ ಕೊಟ್ಟಿದೆ-ಜಸ್ವಂತ್: ನ್ಯಾಯಾಲಯದ ತೀರ್ಪಿನಿಂದ ತಾವು ಖುಷಿಗೊಂಡಿರುವುದಾಗಿ ತಿಳಿಸಿರುವ ಜಸ್ವಂತ್ ಸಿಂಗ್, ಪುಸ್ತಕದಲ್ಲಿ ತಾನು ಯಾರನ್ನೂ ನಿಂದಿಸಿಲ್ಲ. ಹಾಗಾಗಿ ಪುಸ್ತಕದ ಮೇಲೆ ನಿಷೇಧ ಹೇರುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.