ಹೈದರಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 17:28 IST )
ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಮುಖ್ಯ ಭದ್ರತಾ ಅಧಿಕಾರಿ ಎನ್.ಎಸ್.ಸಿ.ಜಾನ್ ವೆಸ್ಲಿ ಅವರ ನಿವಾಸದಲ್ಲಿ ದುಃಖ ಮಡುಗಟ್ಟಿದೆ.
ಒಂದೆಡೆ ಮುಖ್ಯಮಂತ್ರಿ ವೈಎಸ್‌ಆರ್ ಅವರ ಪಾರ್ಥಿವ ಶರೀರಕ್ಕೆ ಲಕ್ಷಾಂತರ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದ್ದರೆ, ಮತ್ತೊಂದೆಡೆ ಶಾಂತಿನಗರದ ಕಾಲೋನಿಯಲ್ಲಿರುವ ವೆಸ್ಲಿ ನಿವಾಸಕ್ಕೆ ಅಪಾರ ಸಂಖ್ಯೆಯಲ್ಲಿ ಬಂಧುಗಳು, ಸಹೋದ್ಯೋಗಿಗಳು, ಸ್ನೇಹಿತರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.
44ವರ್ಷದ ವೆಸ್ಲಿ ಅವರು ಪತ್ನಿ ಹಾಗೂ 10ವರ್ಷದ ಪುತ್ರ ಮತ್ತು ಆರು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಹೆಚ್ಚುವರಿ ಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಎ.ಆರ್.ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪ್ರಕಾಶಂ ಜಿಲ್ಲೆಯ ಅಂಗೋಲಿಯಾ ವೆಸ್ಲಿ ಅವರು 1990ರಲ್ಲಿ ಗ್ರೂಪ್ 1 ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಡಿಎಸ್‌ಪಿ ಆಗಿ ನೇಮಕಗೊಂಡಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯದ ಪದವಿ ಪಡೆದ ಅವರು ಉಸ್ಮಾನಿಯ ವಿಶ್ವವಿದ್ಯಾಲಯದ ಕಾನೂನು ಪದವಿ ಕೂಡ ಪಡೆದಿದ್ದರು. ಸದಾ ನಗುತ್ತಿದ್ದ ವೆಸ್ಲಿ ಅವರು ಮಿತಭಾಷಿಯಾಗಿದ್ದರು ಎಂದು ಅವರ ಸ್ನೇಹಿತರು ಅವರ ಗುಣಗಾನ ಮಾಡಿದರು.