ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಣ್ಣಲ್ಲಿ ಮಣ್ಣಾಯಿತು 'ಪುಲಿವೆಂದುಲ ಪುಲಿ......' (Rajashekahr Reddy | Pulivendula | Kadapa | Funeral)
 
WD
ಆಂಧ್ರಪ್ರದೇಶದ ಜನತೆಯ ಮನೆಮನದಲ್ಲಿ ತನ್ನದೇ ಛಾಪು ಮೂಡಿಸಿ ಧ್ರುತಾರೆಯಂತೆ ಮಿಂಚಿ ಮರೆಯಾದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರು, ಶುಕ್ರವಾರ ಪುಲಿವೆಂದುಲದಲ್ಲಿರುವ ತನ್ನ ಅಚ್ಚುಮೆಚ್ಚಿನ ತೋಟದ ಹಸಿರು ವನಸಿರಿಯ ಮಡಿಲಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋದರು. ಮೃತ್ಯುವಾಗಿ ಕಾಡಿದ್ದ ಹೆಲಿಕಾಫ್ಟರ್ ಅಪಘಾತದಲ್ಲಿ ಹಠಾತ್ ಆಗಿ ಸಾವನ್ನಪ್ಪಿ ರಾಷ್ಟ್ರವೇ ದಿಗ್ಭ್ರಮೆಗೊಳ್ಳುವಂತೆ ಮಾಡಿದ ನಾಯಕನಿಗೆ ರಾಷ್ಟ್ರದ ಜನತೆ ಭಾವಪೂರ್ಣ ಅಂತಿಮ ವಿದಾಯ ಕೋರಿದರು.

ಪುಲಿವೆಂದುಲದ ಇಡುಪುಲಪಾಯದ ವೈ.ಕೆ. ಕಣಿವೆಯಲ್ಲಿ ರಾಜಶೇಖರ ರೆಡ್ಡಿಯವರ ಅಂತಿಮ ಸಂಸ್ಕಾರವು ಕ್ರೈಸ್ತ ಧರ್ಮದ ವಿಧಿವಿಧಾನಗಳಂತೆ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಶುಕ್ರವಾರ ಸಾಯಂಕಾಲ ನಡೆಯುತು. ರಾಷ್ಟ್ರದ ಗಣ್ಯಾತಿ ಗಣ್ಯರು ಸೇರಿದಂತೆ ಲಕ್ಷಾಂತರ ಮಂದಿ ಈ ದುಃಖಮಯ ಸನ್ನಿವೇಶಕ್ಕೆ ಸಾಕ್ಷಿಯಾದರು.

ರಾಜಕಾರಣಿಗಳು ಪಕ್ಷಭೇದ ಮರೆತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಜನಸಾಗರ ಹರಿದು ಬಂದು ಉಂಟಾದ ನೂಕು ನುಗ್ಗಲಿನಿಂದಾಗಿ ಕೊನೆಯಲ್ಲಿ ಎಲ್ಲವೂ ಅಲ್ಲೋಲಕಲ್ಲೋವಾಗಿದ್ದು ಅಸ್ತವ್ಯಸ್ತವಾಗಿ ಮುಕ್ತಾಯಗೊಂಡಿತು. ಹಾಕಿದ್ದ ತಡೆಗೋಡೆಗಳನ್ನೆಲ್ಲ ಮುರಿದು ಮುನ್ನುಗ್ಗಿದ ಸಹಸ್ರ ಸಹಸ್ರ ಜನತೆಯು ಪೊಲೀಸರ ಲಾಠಿಚಾರ್ಜಿಗೂ ಬಗ್ಗಲಿಲ್ಲ.

ತಮ್ಮಮೆಚ್ಚಿನ ನಾಯಕನಿಗೆ ಅಶ್ರುತರ್ಪಣಕ್ಕಾಗಿ ಆಗಮಿಸಿದ್ದ ಮಂದಿ ತಾಮುಂದು ನಾಮುಂದು ಎಂಬಂತೆ ಮುಗಿಬಿದ್ದಿದ್ದು, ಎಲ್ಲವೂ ಅಯೋಮಯವಾಯಿತು. ಅವರ ಕುಟುಂಬದ ಸದಸ್ಯರನ್ನು ಹರಸಾಹಸದೊಂದಿಗೆ ಸಮಾದಿಯ ಬಳಿಗೆ ಕರೆದೊಯ್ದು, ಅಂತ್ಯವಿಧಿಗಳ ಬಳಿಕ ಅಲ್ಲಿಂದ ಕರೆತರಲಾಯಿತು. ಜನತೆಗೆ ಶಾಂತರೀತಿಯಿಂದ ವರ್ತಿಸುವಂತೆ ಪದೇಪದೇ ಮಾಡಿದ ಮನವಿ ಗಾಳಿಯಲ್ಲಿ ತೇಲಿಹೋಯಿತೆ ವಿನಹ ಜನತೆಯ ಮನಸ್ಸಿಗೆ ನಾಟಿದಂತೆ ತೋರಲಿಲ್ಲ. ಹೇಗಾದರೂ ಮಾಡಿ ಶವಪೆಟ್ಟಿಗೆಯ ಬಳಿ ತಲುಪಬೇಕೆಂಬ ಜನತೆಯ ಅಭಿಮಾನ ಹುಚ್ಚುಹೊಳೆಯಂತೆ ಭೋರ್ಗರೆದು ಯಾವುದೂ ವ್ಯವಸ್ಥಿತ ರೀತಿಯಲ್ಲಿ ನಡೆಯಲಿಲ್ಲ.

ಕ್ರೈಸ್ತ ಧರ್ಮದ ವಿಧಿವಿಧಾನದಂತೆ ರೆಡ್ಡಿಯವರ ಅಂತ್ಯ ಸಂಸ್ಕಾರ ನಡೆಯಿತು. ವೈಎಸ್ಆರ್‌ಗೆ ಅತ್ಯಂತ ನಿಕಟವಾಗಿದ್ದ ಕರ್ನಾಟಕದ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಈ ಕಾರ್ಯದಲ್ಲಿ ಪಾಲ್ಗೊಂಡರು.

ಬುಧವಾರದಂದು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ 'ರಚ್ಚಾಬಂದಿ' (ಗ್ರಾಮಸಭೆ) ಕಾರ್ಯಕ್ರಮದ ಆರಂಭಕ್ಕಾಗಿ ಚಿತ್ತೂರಿಗೆ ತೆರಳುವ ದಾರಿಯಲ್ಲಿ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಸೇರಿಗದಂತೆ ಇತರ ನಾಲ್ವರೊಂದಿಗೆ ರೆಡ್ಡಿ ದುರಂತ ಮರಣ ಕಂಡಿದ್ದರು.

ಶುಕ್ರವಾರ ಮುಂಜಾನೆ ಅವರ ಪಾರ್ಥಿವ ಶರೀರವನ್ನು ಹೈದರಾಬಾದಿನ ಅವರ ಮನೆಯಿಂದ ಮೆರವಣಿಗೆಯಲ್ಲಿ ಮೊದಲು ಗಾಂಧಿ ಭವನದಲ್ಲಿರುವ ಕಾಂಗ್ರೆಸ್ ಕಚೇರಿಗೂ ಬಳಿಕ ಲಾಲ್ ಬಹಾದ್ದೂರು ಶಾಸ್ತ್ರಿ ಕ್ರೀಡಾಂಗಣಕ್ಕೂ ಒಯ್ದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಇಲ್ಲಿ ಅನೇಕ ಗಣ್ಯರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಪರಿಸ್ಥಿತಿಯ ವ್ಯಂಗ್ಯವೆಂದರೆ, ಇದೇ ಕ್ರೀಡಾಂಗಣದಲ್ಲಿ ಅವರು ಮೇ ತಿಂಗಳಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ