ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬಾಕೆ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಬೀರಾ ಖಾನ್ ಎಂಬ ಗೃಹಿಣಿ ಅಂಧೇರಿಯ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಐದು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
"ರಾಷ್ಟ್ರದಲ್ಲಿ ಏಕಕಾಲಕ್ಕೆ ಐದು ಗಂಡು ಮಕ್ಕಳು ಜನಿಸುತ್ತಿರುವುದು ಇದೇ ಮೊದಲಾಗಿದ್ದು, ಎಲ್ಲಾ ಐದೂ ಮಕ್ಕಳು ಕ್ಷೇಮವಾಗಿದ್ದಾರೆ. ಈ ಹಿಂದಿನ ಪ್ರಕರಣಗಳಲ್ಲಿ ಎಲ್ಲಾ ಐದು ಮಕ್ಕಳು ಬದುಕುಳಿದ ಉದಾಹರಣೆ ಇಲ್ಲ. ಹುಟ್ಟಿದ ತಕ್ಷಣವೇ ಕೆಲವು ಮಕ್ಕಳು ಸಾಯುತ್ತಿದ್ದವು" ಎಂಬುದಾಗಿ ಡಾ| ಸುಚಿತ್ರ ಪಂಡಿತ್ ಹೇಳಿದ್ದಾರೆ.
ಈ ಮಹಿಳೆಗೆ ಇದೀಗಾಗಲೇ 10 ತಿಂಗಳ ಗಂಡು ಮಗು ಒಂದಿದೆ. ಇದೀಗ ಜನಿಸಿರುವ ಐದು ಮಕ್ಕಳಲ್ಲಿ ಎರಡು ಮಕ್ಕಳನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದರೆ, ಮತ್ತೆ ಮೂರು ಮಕ್ಕಳನ್ನು ತುರ್ತ ನಿಗಾ ಘಟಕದಲ್ಲಿ ಇರಿಸಲಾಗಿದೆ.
"ಇದೊಂದು ಅವಧಿಪೂರ್ವ ಹೆರಿಗೆಯಾಗಿದ್ದು, ಕೆಲವು ಸಂಕೀರ್ಣತೆಗಳು ಉಂಟಾಗ ಬಹುದೆಂಬ ಕಾರಣಕ್ಕೆ ನಾವು ಈ ಹೆರಿಗೆಗೆ ಸರ್ವ ಸನ್ನದ್ಧರಾಗಿದ್ದೆವು" ಎಂಬುದಾಗಿ ಪಂಡಿತ್ ಹೇಳಿದ್ದಾರೆ.
ಯಶಸ್ವೀ ಹೆರಿಗೆಯಿಂದ ಸಂತಸಗೊಂಡಿರುವ ಸಬೀರಾ, ಕನಿಷ್ಠಪಕ್ಷ ಒಂದಾದರೂ ಹೆಣ್ಣು ಮಗುವಾಗಿರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಇವರ ಪತಿ ಉಬೇದ್ ಅವರೂ ಸಂಸತ ಗೊಂಡಿದ್ದಾರೆ. ಉಬೇದ್ ಮೀರಾ ರಸ್ತೆಯಲ್ಲಿ ಒಂದು ಗಾರ್ಮೆಂಟ್ ಅಂಗಡಿ ಇರಿಸಿಕೊಂಡಿದ್ದಾರೆ.