ಬಟ್ಟೆಬಿಚ್ಚಿಸಿ ಗುಪ್ತಾಂಗಕ್ಕೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು
ನವದೆಹಲಿ, ಶನಿವಾರ, 5 ಸೆಪ್ಟೆಂಬರ್ 2009( 13:42 IST )
ಅದೇನೇ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬಂದರೂ ರ‌್ಯಾಗಿಂಗ್ ಎಂಬ ಪೀಡೆ ಅಷ್ಟು ಸುಲಭದಲ್ಲಿ ತೊಲಗುವಂತೆ ಕಾಣುತ್ತಿಲ್ಲ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯೊಬ್ಬನನ್ನು ಬಟ್ಟೆಬಿಚ್ಚಿಸಿ ಆತನ ಗುಪ್ತಾಂಗಕ್ಕೆ ಒದ್ದಿರುವ ಘಟನೆ ವರದಿಯಾಗಿದೆ. ಅತ್ಯಂತ ಕಷ್ಟದಿಂದ ಕಾಲೇಜು ಪ್ರವೇಶ ಪಡೆದಿರುವ ಈತನನ್ನು 'ಪರಿಚಯ'ದ ಹೆಸರಿನಲ್ಲಿ ವಿದ್ಯಾರ್ಥಿಗಳು ಹಿಂಸಾತ್ಮಕವಾಗಿ ನಡೆಸಿಕೊಂಡಿರುವ ಆಘಾತಕಾರಿ ಘಟನೆ ಪಶ್ಚಿಮ ದೆಹಲಿಯ ವಿವೇಕ್ ನಗರದಲ್ಲಿ ಸಂಭವಿಸಿದೆ.
17ರ ಹರೆಯ ಈ ವಿದ್ಯಾರ್ಥಿಯೀಗ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಜನನಾಂಗಕ್ಕೆ ಮೂರು ಹೊಲಿಗೆ ಹಾಕಲಾಗಿದೆ.
ಈ ದುರ್ಘಟನೆಯು ಸೆಪ್ಟಂಬರ್ 2ರಂದು ಪೂರ್ವಾಹ್ನ ಸುಮಾರು 11.15ರ ಸುಮಾರಿಗೆ ಸಂಭವಿಸಿದೆ. ಇದು ಈ ಯುವಕನಿಗೆ ಕಾಲೇಜಿನ ದ್ವಿತೀಯ ದಿನವಾಗಿತ್ತು. ರಿಕ್ಷಾಚಾಲಕನ ಪುತ್ರನಾಗಿರುವ ಈತ ಆರ್ಥಿಕ ಸಂಕಷ್ಟದೊಂದಿಗೆ ವಿದ್ಯಾಭ್ಯಾಸ ನಡೆಸುತ್ತಿದ್ದು, ಇದೀಗ ಆತ ದೈಹಿಕ ನೋವಿನೊಂದಿಗೆ ಮಾನಸಿಕ ಆಘಾತವನ್ನೂ ಅನುಭವಿಸಬೇಕಾಗಿದೆ.
ತನ್ನ ಪುತ್ರನನ್ನು ದಪ್ಪನೆಯ ಲೋಹದ ಸರಳು ಹಾಗೂ ದೊಣ್ಣೆಯಿಂದ ಥಳಿಸಲಾಗಿದೆ ಎಂದು ವಿದ್ಯಾರ್ಥಿಯ ತಂದೆ ದೂರಿದ್ದಾರೆ. ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಒಬ್ಬ ಅಪ್ರಾಪ್ತ ಸೇರಿದಂತೆ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
"ಈ ವಿದ್ಯಾರ್ಥಿ ಕಾಲೇಜಿಗೆ ತೆರಳಿದ ಮೊದಲನೆ ದಿವಸವೇ ಆತನಿಗೆ ಕಿರುಕುಳ ನೀಡಲಾಗಿತ್ತು. ಈ ವಿಚಾರವನ್ನು ತಾನು ಪ್ರಾಂಶುಪಾಲರ ಬಳಿ ದೂರಿದ್ದೇನೆ ಎಂದು ಬಲಿಪಶು ವಿದ್ಯಾರ್ಥಿ ಹೇಳಿದ್ದಾನೆ. ಮರುದಿನ ದ್ವಿತೀಯ ಹಾಗೂ ತೃತೀಯ ವರ್ಷದ ಕನಿಷ್ಠ ಹನ್ನೆರಡು ಮಂದಿ ಒಟ್ಟು ಸೇರಿ ಆತನಿಗೆ ಬಟ್ಟೆಬಿಚ್ಚುವಂತೆ ಒತ್ತಾಯಿಸಿದ್ದರು. ಆತ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳು ಸೇರಿ ಆತನ ಮರ್ಮಾಂಗಕ್ಕೆ ಪದೇಪದೇ ಲೋಹದ ಸರಳಿನಲ್ಲಿ ಥಳಿಸಿದರು ಎಂಬುದಾಗಿ ಜಂಟಿ ಆಯುಕ್ತ ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.
ಕುಸುಮಾಕರ್ ತ್ರಿಪಾಠಿ, ಯೋಗೇಶ್, ವಿನೋದ್, ರಾಜು, ಸತೀಶ್ ಹಾಗೂ 17ರ ಹರೆಯದ ವಿದ್ಯಾರ್ಥಿಯೊಬ್ಬನ್ನು ಬಂಧಿಸಲಾಗಿದೆ.