ಮುಂಬೈ ದಾಳಿಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವಲ್ಲಿ ಪಾಕಿಸ್ತಾನ ಗಂಭೀರವಾಗಿಲ್ಲ ಎಂದು ದೂರಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಶ್ಯಕವಿರುವಷ್ಟು ಪುರಾವೆಗಳನ್ನು ಭಾರತವು ಒದಗಿಸಿದೆ ಎಂದು ಹೇಳಿದ್ದಾರೆ.
ಕಳೆದ ನವೆಂಬರ್ ತಿಂಗಳ 26ರಂದು ನಡೆದ ಉಗ್ರವಾದಿ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಮಗ್ರ ಮಾತುಕತೆ ಸ್ಥಗಿತಗೊಳ್ಳಲು ಪಾಕಿಸ್ತಾನವೇ ಕಾರಣ ಎಂದು ನುಡಿದ ಸಚಿವರು ಮಾತುಕತೆ ಪ್ರಕ್ರಿಯೆ ಮುಂದುವರಿಯಲು ಪಾಕಿಸ್ತಾನವೇ ಕ್ರಮಕೈಗೊಳ್ಳಬೇಕು ಎಂದು ನುಡಿದರು.
ಇದೀಗಾಗಲೇ ಪಾಕಿಸ್ತಾನಕ್ಕೆ ಹಸ್ತಾಂತರಿಸಿರುವ ಆರು ದಾಖಲೆ ಕಡತದಲ್ಲಿ ಸಂಚುಕೋರರ ವಿರುದ್ಧ ಕಾನೂನಿ ಕ್ರಮಗಳನ್ನು ಜರುಗಿಸಿ ಶಿಕ್ಷಿಸಲು ಸಾಕಷ್ಟು ಪುರಾವೆಗಳಿವೆ ಎಂಬುದಾಗಿ ಕಾನೂನೀ ತಜ್ಞರು ಹೇಳುತ್ತಾರೆ" ಎಂದು ಅವರು ಹೇಳಿದ್ದಾರೆ.
ಭಾರತ ಅಥವಾ ಮುಂಬೈಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಪಾಕಿಸ್ತಾನವು ಗಂಭೀರವಾಗಿದೆ ಎಂದಾದಲ್ಲಿ ಅವರು ತಮ್ಮ ಬದ್ಧತೆಯನ್ನು ಭಾರತ ಹಾಗೂ ವಿಶ್ವಕ್ಕೆ ತೋರಿಸಲು ಇದೊಂದು ಅವಕಾಶ ಎಂದು ಅವರು ನುಡಿದರು.