ಆಂಧ್ರಪ್ರದೇಶವನ್ನು ರಾಜನಂತೆ ಆಳುತ್ತಾ ಬಡವರ ಬಂಧುವಾಗಿ ಗೋಚರಿಸಿದ್ದ ವೈಎಸ್ ರಾಜಶೇಖರ ರೆಡ್ಡಿಯವರು ಅತ್ತ ಮಣ್ಣಾಗುತ್ತಿರುವಂತೆಯೇ ಇತ್ತ ಅವರ ಉತ್ತರಾಧಿಕಾರಕ್ಕಾಗಿ ಸ್ಫರ್ಧೆ ತೆರೆಮರೆಯಲ್ಲಿ ನಡೆಯುತ್ತಿದೆ. ಅವರ ಪುತ್ರನೇ ಗದ್ದುಗೆ ಏರಬೇಕು ಎಂಬುದು ಅವರ ಕಟ್ಟಾ ಅಭಿಮಾನಿಗಳ ಇಚ್ಚೆ.
ಈ ಮಧ್ಯೆ ಪಕ್ಷ ಒಡೆಯುವ ಸಾಧ್ಯತೆಗಳನ್ನು ಉಸ್ತುವಾರಿ ಮುಖ್ಯಮಂತ್ರಿ ಕೆ. ರೊಸಯ್ಯ ಅವರು ತಳ್ಳಿಹಾಕಿದ್ದಾರೆ. ರಾಜಶೇಖರ ರೆಡ್ಡಿ ಅವರ ಅಂತ್ಯಕ್ರಿಯೆ ನಡೆದ ಒಂದು ದಿನದ ಬಳಿಕ, ಪಕ್ಷದ ಆಂಧ್ರದ ಉಸ್ತುವಾರಿಯಾಗಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ಕಾಲಿರಿಸಿ 100 ದಿನಗಳಷ್ಟೆ ಆಗಿರುವ ರಾಜಶೇಖರ ಪುತ್ರ ಜಗನ್ ಮೋಹನ್ ಅವರೇ ತಮ್ಮ ತಂದೆಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಸೂಕ್ತ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಜಗನ್ ಮೋಹನ್ ಅವರು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಡಪ್ಪಾ ಕ್ಷೇತ್ರದಿಂದ ಸ್ಫರ್ಧಿಸಿ ಪ್ರಥಮಬಾರಿಗೆ ಸಂಸದರಾಗಿದ್ದಾರೆ.
ಶನಿವಾರ ನಡೆದ ವಿಧಾನಪರಿಷತ್ ಸದಸ್ಯರ ಸಭೆಯಲ್ಲೂ ಸಹ ಜಗನ್ ಮೋಹನ್ ಬಗ್ಗೆ ಒಲವು ತೋರಲಾಗಿದೆ. ಏಳು ದಿನಗಳ ಶೋಕಾಚರಣೆಯ ಬಳಿಕ ಈ ವಿಚಾರದ ಕುರಿತು ಹೈಕಮಾಂಡ್ ಸಹಾಯ ಪಡೆಯಲು ನಿರ್ಧರಿಸಲಾಗಿಯಿತು.
ಆಂಧ್ರಪ್ರದೇಶದ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದ್ದು ಇದು ಸೋನಿಯಾ ಅವರಿಗೆ ಬೆಂಬಲವಾಗಿ ನಿಂತಿದೆ. ಇದರಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 33 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದು ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.