ತಮ್ಮಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಅರೆಕಾಲಿಕ ಶಿಕ್ಷಕರು ಉತ್ತರಪ್ರದೇಶ ವಿಧಾನಸಭೆಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿಛಾರ್ಜ್ ನಡೆಸಿದ್ದು ಕನಿಷ್ಠ ಆರು ಶಿಕ್ಷಕರು ಗಾಯಗೊಂಡಿದ್ದಾರೆ.
ಸಾವಿರಾರು 'ಶಿಕ್ಷಾಮಿತ್ರ' ಅಥವಾ ಅರೆಕಾಲಿಕ ಶಿಕ್ಷಕರು ಶಿಕ್ಷಕರ ದಿನವಾದ ಶನಿವಾರ ತಮ್ಮ ಸೇವೆಯನ್ನು ಕಡ್ಡಾಯಗೊಳಿಸಿ, ಗೌರವವೇತನವನ್ನು ಏರಿಸಬೇಕು ಎಂಬುದಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಈ ಕುರಿತು ಅರೆಕಾಲಿಕ ಶಿಕ್ಷಕರು ಹಾಗೂ ಸರ್ಕಾರದ ನಡುವೆ ನಡೆದಿರುವ ಲಿಖಿತ ಒಪ್ಪಂದವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಪ್ರದರ್ಶನ ನಡೆಸುತ್ತಿದ್ದ ವೇಳೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿರುವ ಶಿಕ್ಷಕ ಮಿತ್ರ ಸಂಘದ ಉಪಾಧ್ಯಕ್ಷ ಪ್ರವೀಣ್ ಶ್ರೀವಾಸ್ತವ ಹೇಳಿದ್ದಾರೆ. ನಾವು ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆಗೆ ಸಿದ್ಧವಿದ್ದೆವು ಎಂದೂ ಅವರು ಹೇಳಿದ್ದಾರೆ. ಈ ವೇಳೆ 35 ಶಿಕ್ಷಕರು ಗಾಯಗೊಂಡಿದ್ದಾರೆಂದು ಅವರು ದೂರಿದ್ದಾರೆ.
ವಿಧಾನಸಭಾ ಮಾರ್ಗದಲ್ಲಿ ರಸ್ತೆ ತಡೆಯುಂಟಾದ ಕಾರಣ ನಾವು ಲಘು ಲಾಠಿಪ್ರಹಾರ ನಡೆಸಬೇಕಾಯಿತು ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.