ಇಶ್ರತ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿರುವ ನ್ಯಾಯಮೂರ್ತಿ ಎಸ್.ಪಿ. ತಮಂಗ್ ಅವರು ಸಲ್ಲಿಸಿರುವ ವರದಿಯಲ್ಲಿ ಮೃತ ಇಶ್ರತ್ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೋಯ್ಬಾದೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂದು ಹೇಳಿದ್ದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಕೇಂದ್ರವು ಕಳೆದ ತಿಂಗಳಲ್ಲಿ ಹೈಕೋರ್ಟಿಗೆ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ಇಶ್ರತ್ ಹಾಗೂ ಆಕೆಯ ಸಹಚರ ಜಾವೇದ್ ಶೇಕ್ ಅವರುಗಳು ಲಷ್ಕರೆ ಸಂಪರ್ಕ ಹೊಂದಿದ್ದರು ಎಂಬುದಾಗಿ ಹೇಳಿದೆ. ಜಾವೇದ್ ಸಹ 2004ರಲ್ಲಿ ನಡೆಸಲಾಗಿದ್ದ ಎನ್‌ಕೌಂಟರ್‌ನಲ್ಲಿ ಇಶ್ರತ್‌ಳೊಂದಿಗೆ ಪೊಲೀಸರ ಗುಂಡಿನಿಂದ ಸಾವನ್ನಪ್ಪಿದ್ದ.
ಇಶ್ರತ್‌ಳ ತಾಯಿ ಶಮೀಮ ಕೌಸರ್ ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂಬುದಾಗಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಈ ಅಫಿದಾವಿತ್ ಸಲ್ಲಿಸಿದ್ದು, ಇದೀಗ ತಮಂಗ ವರದಿಯ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಅಫಿದಾವಿತ್‌ನಲ್ಲಿ ಈ ಇಬ್ಬರಿಗೆ ಲಷ್ಕರೆಯೊಂದಿಗೆ ನಿಕಟ ಸಂಪರ್ಕವಿದ್ದು, ಇವರನ್ನು ಗುಜರಾತಿಗೆ ಬುಡಮೇಲು ಕೃತ್ಯಗಳನ್ನು ನಡೆಸಲು ಕಳುಹಿಸಲಾಗಿತ್ತು ಎಂದು ಅಫಿದಾವಿತ್‌ನಲ್ಲಿ ಹೇಳಲಾಗಿದೆ.
ಪ್ರಕರಣದ ಕುರಿತಂತೆ ಹೊಸ ಸಿಬಿಐ ತನಿಖೆಯನ್ನು ವಿರೋಧಿಸಿದ್ದ ಕೇಂದ್ರವು ಕಳೆದ ಆಗಸ್ಟ್ ಆರರಂದು 14 ಪುಟಗಳ ಅಫಿದಾವಿತ್ ಸಲ್ಲಿಸಿದ್ದು, ಇದರಲ್ಲಿ ಗುಪ್ತಚರ ಏಜೆನ್ಸಿಗಳು ರಾಷ್ಟ್ರದಲ್ಲಿ ಲಷ್ಕರೆ ಕಾರ್ಯಕರ್ತರ ಚಟುವಟಿಕೆಗಳ ಮಾಹಿತಿ ಹೊಂದಿದ್ದು ಸಂಬಂಧಿಸಿದ ರಾಜ್ಯಸರ್ಕಾರಗಳೊಂದಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದೆ. ಸರ್ಕಾರದ ಆಧೀನ ಕಾರ್ಯದರ್ಶಿ ಅವರು ಈ ಅಫಿದಾವಿತ್ ಸಲ್ಲಿಸಿದ್ದರು.
ಜಾವೇದ್ ಶೇಕ್ ಇಸ್ಲಾಮ್‌ಗೆ ಮತಾಂತರ ಹೊಂದಿದವನಾಗಿದ್ದು, ಅಪರಾಧಿ ಹಿನ್ನೆಲೆಯುಳ್ಳವನು. ಈತನ ವಿರುದ್ಧ ಪುಣೆ ಪೊಲೀಸರು 1992ರಿಂದ 1998ರ ತನಕ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದರು ಎಂದು ಅಫಿದಾವಿತ್‌ನಲ್ಲಿ ಹೇಳಲಾಗಿದೆ. ಆತ ತನ್ನ ಮುಸ್ಲಿಂ ಹೆಸರಿನಲ್ಲಿ ತಾನು ಮೊಹಮ್ಮದ್ ಎಂಬಾತನ ಪುತ್ರ ಎಂದು ನಮೂದಿಸಿ 1994ರಲ್ಲಿ ಪಾಸ್‌ಪೋರ್ಟ್ ಪಡೆದಿದ್ದು, ದುಬೈಹಾಗು ಇತರ ಸ್ಥಳಗಳಿಗೆ ಹಲವಾರು ಬಾರಿ ಪ್ರಯಾಣಿಸಿದ್ದ. ಆತನ ಪಾಸ್‌ಪೋರ್ಟ್ 2004ರ ತನಕ ಸಿಂಧುವಾಗಿದ್ದರೂ ಆತ ತನ್ನ ಹಿಂದೂ ಹೆಸರು ಪ್ರಾಣೇಶ್ ಪಿಳ್ಳೈ ಎಂಬ ಹೆಸರಿನಲ್ಲಿ 2003ರಲ್ಲೇ ಇನ್ನೊಂದು ಪಾಸ್‌ಪೋರ್ಟ್ ಹೊಂದಿದ್ದ. ಇದರಲ್ಲಿ ಗೋಪಿನಾಥ್ ಪಿಳ್ಳೈ ತನ್ನ ತಂದೆ ಎಂದು ಹೇಳಿಕೊಂಡಿದ್ದು, ತಾನು ಎಂದಿಗೂ ತಂಗದೇ ಇದ್ದ ಕೇರಳದ ವಿಳಾಸ ನೀಡಿದ್ದ.
ಗೋಪಿನಾಥ್ ಪಿಳ್ಳೈ ಸುಪ್ರೀಂ ಕೋರ್ಟಿನಲ್ಲೂ, ಶಮೀಮ ಕೌಸರ್ ಗುಜರಾತ್ ಹೈಕೋರ್ಟಿನಲ್ಲೂ ಸಲ್ಲಿಸಿರುವ ಅಫಿದಾವಿತ್‌ಗಳಲ್ಲಿ ಮೃತರ ಹಿನ್ನೆಲೆ ಹಾಗೂ ಚಟುವಟಿಕೆಗಳ ಕುರಿತು ನೀಡಲಾಗಿರುವ ವಿವರಗಳು ಪರಸ್ಪರ ವ್ಯತಿರಿಕ್ತವಾಗಿವೆ ಎಂದು ಕೇಂದ್ರದ ಅಫಿದಾವಿತ್ ಹೇಳಿದೆ. ಪಿಳ್ಳೈ ತನ್ನ ಅಫಿದಾವಿತ್‌ನಲ್ಲಿ ತನ್ನ ಪುತ್ರ ಜಾವೇದ್ ಪುಣೆ ಮೂಲದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಎಂದು ಹೇಳಿದ್ದರೆ, ಶಮೀಮಾ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಜಾವೇದ್ ಸುಗಂಧದ್ರವ್ಯಗಳು ಹಾಗೂ ಇತರ ಪ್ರಸಾಧನ ಸಾಮಾಗ್ರಿಗಳ ವ್ಯಾಪಾರ ಮಾಡುತ್ತಿದ್ದು, ಈತನೊಂದಿಗೆ ಇಶ್ರತ್ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಹೇಳಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತರಾಗಿರುವ ಇತರ ಇಬ್ಬರಾದ ಅಮ್ಜದ್ ಅಲಿ ರಾಣಾ ಮತ್ತು ಜೀಶಾನ್ ಜೌಹರ್ ಅವರುಗಳು ಪಾಕಿಸ್ತಾನಿ ಪ್ರಜೆಗಳಾಗಿದ್ದು ಲಷ್ಕರೆ ಕಾರ್ಯಕರ್ತರಾಗಿದ್ದಾರೆ ಎಂದು ಅಫಿದಾವಿತ್‌ನಲ್ಲಿ ಹೇಳಲಾಗಿದೆ. ಅಲ್ಲದೆ, ಇವರಿಬ್ಬರು ಮೌಜಾಮಿಲ್ ಸೇರಿದಂತೆ ಇತರ ಲಷ್ಕರೆ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಅಮ್ಜದ್ ಅಲಿ ಅಲಿಯಾಸ್ ಬಬ್ಬರ್ ಎಂಬಾತ 2004ರ ಮೇ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆದಿದ್ದ ಈತ ಜೀಶನ್ ಜೌಹರ್ ಜತೆಗೆ ಭಾರತ ಪ್ರವೇಶಿಸಿದ್ದು, ಆತನಿಗೆ ಗುಜರಾತಿನಲ್ಲಿ ಉಗ್ರಗಾಮಿ ಜಾಲ ಹುಟ್ಟುಹಾಕಲು ಖಚಿತ ನಿರ್ದೇಶನ ನೀಡಲಾಗಿತ್ತು ಮತ್ತು ಜಾವೇದ್ ಆತನೊಂದಿಗೆ ನಿಕಟಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.
ಈ ನಾಲ್ವರ ಚಲನವಲನದ ಕುರಿತು ಹೆಚ್ಚಿನ ಗುಪ್ತಚರ ಮಾಹಿತಿಗಳನ್ನು ಕೇಂದ್ರ ಗುಪ್ತಚರ ಏಜೆನ್ಸಿಯು ಗುಜರಾತ್ ಪೊಲೀಸರಿಗೆ ನೀಡಿತ್ತು ಎಂದು ಅಫಿದಾವಿತ್‌ನಲ್ಲಿ ಹೇಳಲಾಗಿದೆ.